ಗುರುವಾರ, ಮೇ 18, 2017

ಸಂಬಂಜ ಅನ್ನಾದು ದೊಡ್ದು ಕನಾ.. ಆಶಯದ “ವೆಲ್ಕಮ್ ಜಿಂದಗಿ”



ಸಂಬಂಜ ಅನ್ನಾದು ದೊಡ್ದು ಕನಾ ಎನ್ನುವ ಈ ಸಲದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಘೋಷವಾಕ್ಯಕೆ ಅತ್ಯಂತ ಸೂಕ್ತವಾದ ನಾಟಕ ವೆಲ್ಕಮ್ ಜಿಂದಗಿ. ಜಾಗತೀಕರಣ ಸೃಷ್ಟಿಸಿದ ಒತ್ತಡಗಳಿಗೆ ಒಳಗಾಗಿ ಕೌಟುಂಬಿಕ ವ್ಯವಸ್ಥೆಯ ಬೇರುಗಳೇ ಸಡಿಲವಾಗುತ್ತಿರುವ ಪ್ರಸ್ತುತ ಸಾಮಾಜಿಕ ಸಂದರ್ಭವನ್ನು ಸಮರ್ಥವಾಗಿ ಬಿಂಬಿಸುವ ಈ ನಾಟಕವು ಮಾನವೀಯ ಸಂಬಂಧಗಳ ವಿಘಟನೆ ಹಾಗೂ ಅಂತಃಕರಣಗಳನ್ನು ಅನಾವರಣಗೊಳಸುತ್ತದೆ.

ಸೌಮ್ಯ ಜ್ಯೋಶಿಯವರು ಗುಜರಾತಿಯಲ್ಲಿ ಬರೆದ ವೆಲ್‌ಕಮ್ ಜಿಂದಗಿ ನಾಟಕವನ್ನು ರಾಹಿಲ್ ಭಾರದ್ವಾಜ್‌ರವರು ಹಿಂದಿಗೆ ಅನುವಾದಿಸಿದ್ದು ಸುರೇಶ್ ಭಾರದ್ವಾಜ್‌ರವರು ನವದೆಹಲಿಯ ಎ.ಕೆ.ಎಸ್.ಥಿಯೇಟರ್ ಕಲಾವಿದರಿಗೆ ನಿರ್ದೇಶಿಸಿದ್ದಾರೆ. ರಂಗನಿರಂತರವು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಮೇ ೧7 ರಂದು ಪ್ರದರ್ಶನಗೊಂಡ ಈ ನಾಟಕವು ನೋಡುಗರ ಅಂತಃಕರಣವನ್ನು ಮುಟ್ಟುವಲ್ಲಿ ಯಶಸ್ವಿಯಾಯಿತು.

ಬಾಂಬೆಯಲ್ಲಿ ಒಬ್ಬ ಸಾಮಾನ್ಯ ನೌಕರನಾಗಿ ಕೆಲಸಮಾಡುವ ಅರುಣ್ ಮಲ್ಲೋತ್ರ ಬೆಳಿಗ್ಗೆ ಆರೂವರೆಗೆ ಮನೆಬಿಟ್ಟರೆ ಕೆಲಸ ಮುಗಿಸಿ ಮನೆಗೆ ಮರಳುವುದೇ ರಾತ್ರಿ 9ಕ್ಕೆ. ಎಂಬಿಎ ಓದಿರುವ ಮಗ ವಿವೇಕ್ ಸಂಬಂಧ ತಂದೆ ಜೊತೆಗೆ ಅಷ್ಟಕ್ಕಷ್ಟೆ. ಅರುಣ್ ಪತ್ನಿ ಭಾನು ತಂದೆ ಮಗನ ನಡುವೆ ಸಂವಹನ ಸೇತುವೆಯಾಗಿ ಕೆಲಸಮಾಡುತ್ತಲೇ ಅವರಿಬ್ಬರ ಸಂಬಂಧ ಸರಿಪಡಿಸಲು ಪ್ರಯತ್ನಿಸುತ್ತಲೇ ಇರುತ್ತಾಳೆ. ಮಗ ಬಿಸಿನೆಸ್ ಮಾಡಬೇಕೆಂದರೆ ತಂದೆ ವಿರೋಧಿಸುತ್ತಾನೆ. ತಂದೆ ಒಪ್ಪಿಗೆ ಕೊಟ್ಟಾಗ ಮಗ ನಿರ್ಲಕ್ಷಿಸುತ್ತಾನೆ. ಕೊನೆಗೆ ತಂದೆ ಮಗನ ಸಂಘರ್ಷ ತಾರಕಕ್ಕೇರಿ ಮಗ ಮನೆ ಬಿಟ್ಟು ಹೋಗುತ್ತಾನೆ. ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತಾಡಲು ಭಾಷಣವನ್ನು ಸಿದ್ದಪಡಿಸಿಕೊಂಡ ಅರುಣ್ ಮಳೆಯಿಂದಾಗಿ ಆ ಸಮಾರಂಭ ರದ್ದಾಗಿದ್ದರಿಂದ ಮನೆಯಲ್ಲಿ ಹೆಂಡತಿಯ ಮುಂದೆಯೇ ಭಾಷಣ ಮಾಡುತ್ತಾನೆ. ಆ ಎಲ್ಲಾ ಮನದಾಳದ ಮಾತುಗಳನ್ನು ಭಾನು ತನ್ನ ಮಗನಿಗೆ ಪೋನ್ ಮೂಲಕ ಕೇಳಿಸುತ್ತಾಳೆ. ತಂದೆಯ ಭಾವಪೂರ್ಣ ಮಾತುಗಳನ್ನು ಕೇಳಿದ ಮಗ ಮನೆಗೆ ಮರಳಿ ಅಪ್ಪನನ್ನು ಅಪ್ಪಿಕೊಳ್ಳುವುದರ ಮೂಲಕ ನಾಟಕ ಮುಗಿಯುತ್ತದೆ. ಪ್ರೇಕ್ಷಕರ ಕಣ್ಣುಗಳು ಹನಿಗೂಡುತ್ತವೆ.

ಈಗ ನಗರ ಕೇಂದ್ರಿತ ಬದುಕೇ ಹಾಗಿದೆ. ಅದೂ ಬಾಂಬೆಯಂತಾ ಬೃಹತ್ ನಗರಗಳಲ್ಲಿ ನೌಕರರ ಜೀವನ ಕೆಲಸ ಹಾಗೂ ಸಂಚಾರದಲ್ಲೇ ಕಳೆದು ಹೋಗುತ್ತದೆ. ಇನ್ನು ಮಕ್ಕಳ ಬಗ್ಗೆ ಮುತುವರ್ಜಿ ವಹಿಸಲು ಸಮಯವೆಲ್ಲಿ. ನನಗೆ ಕೇಳಿದ್ದನ್ನು ಕೊಡಿಸಲಿಲ್ಲಾ.. ನನ್ನ ಜೊತೆಗೆ ಸಮಯ ಕಳೆಯಲಿಲ್ಲಾ ಎನ್ನುವುದು ಮಕ್ಕಳ ಆರೋಪವಾಗಿದೆ. ಅಪ್ಪನಿಗೆ ಮಕ್ಕಳ ಜೊತೆ ಸಮಯ ಕಳೆಯಬಾರದೆಂಬ ಬಯಕೆಯಂತೂ ಇರಲಾರದು.. ಅದರೆ ಕಳೆಯಬೇಕೆಂದರೂ ಸಮಯ ಇರುವುದಾದರೂ ಎಲ್ಲಿ. ಹೀಗಾಗಿ ತಂದೆ ಮಕ್ಕಳ ನಡುವಿನ ಸಂಬಂಧದಲ್ಲಿ ಒಂದು ಅಘೋಷಿತ ಗ್ಯಾಪ್ ಕ್ರಿಯೇಟ್ ಆಗಿರುತ್ತದೆ. ಪರೋಕ್ಷವಾಗಿ ಬೇಕುಬೇಡಗಳಿಗೆ ತಂದೆ ಸ್ಪಂದಿಸಿದರೂ ಮಕ್ಕಳ ಮನದಲ್ಲಿ ತಂದೆಯ ಬಗ್ಗೆ ಅಸಹನೆ ಉಳಿದಿರುತ್ತದೆ. ಮಕ್ಕಳು ದೊಡ್ಡವರಾದಂತೆಲ್ಲಾ ಬಿರುಕು ಹೆಚ್ಚಾಗುತ್ತಾ ತಂದೆ ವಿಲನ್ ಎನ್ನಿಸತೊಡಗುತ್ತಾನೆ. ಆಗ ಮಕ್ಕಳು ಮನೆ ಬಿಟ್ಟು ಹೋಗುವ ಅತಿರೇಕದ ನಿರ್ಧಾರಕ್ಕೆ ಬರುತ್ತಾರೆ. ಕೊನೆಗಾಲದಲ್ಲಿ ಹೆತ್ತವರು ಒಂಟಿಯಾಗುತ್ತಾರೆ. ಇಂತಹ ಘಟನೆಗಳು ಈಗ ಅಪರೂಪವಾಗೇನೂ ಉಳಿದಿಲ್ಲ. ಆದರೆ ಈ ನಾಟಕದಲ್ಲಿ ತಂದೆ ತನ್ನ ಮಗನ ಮೇಲೆ ಇಟ್ಟಿರುವ ಕಾಳಜಿ ಕಳಕಳಿಯನ್ನು  ತಾಯಿಯಾದವಳು ಮಗನಿಗೆ ಮನವರಿಕೆ ಮಾಡಿಕೊಟ್ಟು ಬಿರುಕು ಬಿಟ್ಟ ತಂದೆ ಮಗನ ಸಂಬಂಧವನ್ನು ಸುಗಮಗೊಳಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದೇ ಈ ನಾಟಕದ ಸಾರ್ಥಕತೆ. ಹಾಗೂ ಪ್ರಸ್ತುತ ಕೌಟುಂಬಿಕ ನೆಮ್ಮದಿಯ ಅಗತ್ಯತೆಯಾಗಿದೆ. 
 
ಇದೊಂದು ಪ್ಯಾಮಿಲಿ ಡ್ರಾಯಿಂಗ್ ರೂಂ ಡ್ರಾಮಾ. ಇಡೀ ನಾಟಕದಲ್ಲಿ ಇರೋದೇ ಮೂರೇ ಪಾತ್ರಗಳು.  ತಂದೆ ತಾಯಿ ಮತ್ತು ಮಗ. ಒಂದು ಗಂಟೆಗಳ ಕಾಲ ಎಲ್ಲಿಯೂ ಬೋರಾಗದಂತೆ ಈ ಮೂರೂ ಪಾತ್ರಗಳು ತಮ್ಮ ಅಭಿನಯದ ಮೂಲಕ ಸನ್ನಿವೇಶವನ್ನು ಭಾವಪೂರ್ಣವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಇದನ್ನು ಒಂದು ನಾಟಕ ಎನ್ನುವುದಕ್ಕಿಂತಲೂ ಒಂದು ಟೆಲಿಫಿಲಂ ನೋಡಿದಂತಹ ಅನುಭವವನ್ನು ಈ ಪ್ರದರ್ಶನ ಕೊಟ್ಟಿದ್ದಂತೂ ಸತ್ಯ. ಕೌಟುಂಬಿಕ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ಈಗ ಮನೆ ಮನೆ ಕಥೆಯಾಗಿವೆ. ಇಂತಹ ವಸ್ತು ಕನ್ನಡ ರಂಗಭೂಮಿಗೆ ಹೊಸದೇನಲ್ಲಾ. ಈಗಾಗಲೇ ಕನ್ನಡದಲ್ಲಿ ಲಂಕೇಶ್ ಹಾಗೂ ಸೇತುರಾಂರವರು ಕೌಟುಂಬಿಕ ಭಿನ್ಯಾಭಿಪ್ರಾಯಗಳು ಹಾಗೂ ಇಂಟರ್ ರಿಲೇಶನ್ ಕುರಿತು ಹಲವಾರು ಸಶಕ್ತ ನಾಟಕಗಳನ್ನು ಬರೆದಿದ್ದಾರೆ. ವೆಲ್‌ಕಮ್ ಜಿಂದಗಿಯ ರಂಗಪಠ್ಯದಲ್ಲಿ ಅಂತಹ ವಿಶೇಷವೇನಿಲ್ಲಾ. ಆದರೆ ವಿಶೇಷತೆ ಇರುವುದು ಎಲ್ಲರಿಗೂ ಗೊತ್ತಿರುವ ವಸ್ತು ವಿಷಯವನ್ನು ಅಭಿನಯದ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆಯುವಂತೆ ತೋರಿಸುವಲ್ಲಿ. ಇದೊಂದು ನಿಜಕ್ಕೂ ನಟರ ನಾಟಕ. ಭಾವನಾತ್ಮಕ ದೃಶ್ಯಗಳಿದ್ದರೂ ಎಲ್ಲಿಯೂ ಮೆಲೊಡ್ರಾಮಾ ಆಗದ ಹಾಗೆ ನಟರು ಪಾತ್ರವಾಗಿದ್ದಾರೆ. ಕೊನೆಕೊನೆಗೆ ಭಾಷಣ ಮಾಡುವಾಗ ಅರುಣ್ ಪಾತ್ರದಾರಿ ಒಂದಿಷ್ಟು ಹೆಚ್ಚಿಗೆ ಎಮೋಶನಲ್ ಆಗಿದ್ದನ್ನು ಹೊರತು ಪಡಿಸಿದರೆ ಬಾಕಿ ಎಲ್ಲವೂ ಸಂಯಮದ ಅಭಿನಯ. ತಂದೆಯಾಗಿ ರಮೇಶ್ ಕರಚಂದಾನಿ, ತಾಯಿಯಾಗಿ ಅಂಜು ಜೇಟ್ಲಿ ಹಾಗೂ ಮಗನಾಗಿ ವಿವೇಕ್ ಈ ಮೂವರೂ ಪೈಪೋಟಿಗೆ ಬಿದ್ದಂತೆ ನಟಿಸಿ ಇಡೀ ನಾಟಕವನ್ನು ನೋಡುಗರ ಮನಸ್ಸಿಗೆ ಮುಟ್ಟಿಸಿದ್ದಾರೆ.

ದೃಶ್ಯಗಳ ಬ್ಲಾಕಿಂಗ್ ಹಾಗೂ ನಟರ ಮೂವಮೆಂಟ್‌ಗಳು ನಟರ ಸಂಬಾಷಣೆಗೆ ಪೂರಕವಾಗಿ ರೂಪಗೊಂಡು ನಾಟಕ ಎಲ್ಲಿಯೂ ಬೋರಾಗದಂತೆ ಮೂಡಿಬಂದವು. ಮೂಡ್ ಕ್ರಿಯೇಟ್ ಮಾಡಲು ಬಳಸಿದ ಹಿನ್ನೆಲೆ ಸಂಗೀತವು ದೃಶ್ಯಗಳ ಜೊತೆಗೆ ಎಷ್ಟೊಂದು ಹದವಾಗಿ ಬ್ಲೆಂಡ್ ಆಗಿತ್ತೆಂದರೆ ಪ್ರೇಕ್ಷಕರಿಗೆ ತನ್ನ ಇರುವನ್ನು ಎಲ್ಲಿಯೂ ತೋರದೇ ಅಗತ್ಯವಿರುವಷ್ಟು ಮೂಡ್ ಕ್ರಿಯೇಟ್ ಮಾಡಿತು. ಬೆಳಕಿಗೆ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಏನೂ ಇರದೇ ದೃಶ್ಯದ ಅಗತ್ಯಕ್ಕೆ ಬೇಕಾದಷ್ಟು ಮಾತ್ರ ಬೆಳಗಿದ್ದು ಇನ್ನೂ ಹೆಚ್ಚಿನ ಸಾಧ್ಯತೆಗಳಿಗೆ ಅವಕಾಶವಿತ್ತು. ಸೆಟ್‌ನಲ್ಲಿ ಅಂತಹ ವಿಶೇಷತೆ ಏನೂ ಇರದೇ ಸೋಪಾ ಹಾಗೂ ಡೈನಿಂಗ್ ಟೇಬಲ್ ಇರುವ ರಿಯಾಲಿಸ್ಟಿಕ್ ವಿನ್ಯಾಸ ಮಾಡಲಾಗಿದೆ. 
ತಪ್ಪು ಕಲ್ಪನೆ, ಹೊಂದಾಣಿಕೆಯ ಕೊರತೆ ಹಾಗೂ ಸಂಪಾದನೆಯ ಒತ್ತಡಗಳಲ್ಲಿ  ಸಂಬಂಧಗಳು ಬಿರುಕು ಬಿಡುತ್ತಿರುವ ಜಾಗತೀಕರಣದ ಸಂದರ್ಭದಲ್ಲಿ ವೆಲ್‌ಕಮ್ ಜಿಂದಗಿ ನಾಟಕವು ಪ್ರಸ್ತುತವಾಗಿದೆ. ಮನುಷ್ಯ ಸಂಬಂಧಗಳು ಬಿಗಡಾಯಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ಗೊತ್ತಿಲ್ಲದ ಸಂಗತಿ ಏನೆಂದರೆ ಹದಗೆಟ್ಟು ಹೋಗಿರುವ ಸಂಬಂಧಗಳನ್ನು ಹೇಗೆ ಮರು ಹೊಂದಾಣಿಕೆ ಮಾಡುವುದು ಎಂಬುದಾಗಿದೆ.   ಮಧುರ ಸಂಬಂಧಗಳನ್ನು ಮರುಸ್ಥಾಪಿಸಿ ನೆಮ್ಮದಿಯ ಬದುಕನ್ನು ಸ್ವಾಗತಿಸುವ ಈ ನಾಟಕದ ಆಶಯ ಪ್ರತಿಯೊಂದು ಕುಟುಂಬದ ಅಗತ್ಯವಾಗಿದೆ. ನಾಟಕದ ಕಂಟೆಂಟ್ ಹಳೆಯದಾಗಿದ್ದರೂ ಅದನ್ನು ಹೇಳುವ ಕ್ರಮ ಒಂದಿಷ್ಟು ಹೊಸದಾಗಿದೆ. ತಂದೆಯ ಸಂಕೀರ್ಣತೆ, ತಾಯಿಯ ಸಮಯಪ್ರಜ್ಞೆ  ಹಾಗೂ ಮಗನ ದುಡುಕುತನವನ್ನು ತೋರಿಸುತ್ತಲೇ ನೆಮ್ಮದಿಯ ಬದುಕಿಗೆ ಬೇಕಾದ ಅಂತರ್ ಸಂಬಂಧಗಳ ಅಗತ್ಯತೆಯನ್ನು ಹೇಳುವಲ್ಲಿ ವೆಲ್ ಕಮ್ ಜಿಂದಗಿ ಯಶಸ್ವಿಯಾಗಿದೆ. ಸಂಬಂಜಾ ಅನ್ನಾದು ದೊಡ್ದು ಕನಾ ಎನ್ನುವ ದೇವನೂರರ ಮಾತುಗಳನ್ನೇ ಈ ನಾಟಕವೂ ದ್ವನಿಸುತ್ತದೆ.   

     -ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ