ಗುರುವಾರ, ಮಾರ್ಚ್ 23, 2017

ಕೆವೈಎನ್ ‘ಮಲ್ಲಿಗೆ’ ಮೂಲ ಎಲ್ಲಿದೆ..?


ಮೂಲ ಮುಚ್ಚಿಟ್ಟು ನಾಟಕ ಕಟ್ಟು ಪರಂಪರೆ ದಾರಿಯಲ್ಲಿ ಡಾ.ಕೆವೈಎನ್.




ಡಾ.ಕೆ.ವೈ. ನಾರಾಯಣಸ್ವಾಮಿಗಳು 2016ರಲ್ಲಿ ಮಲ್ಲಿಗೆ ಎನ್ನುವ ಒಂದು ಹೊಸ ನಾಟಕ ಬರೆದರು. ಪ್ರಕಾಶ ಶೆಟ್ಟಿಯವರು ತಮ್ಮ ರಂಗಮಂಟಪದ ಕಲಾವಿದರುಗಳಿಗೆ ಈ ನಾಟಕವನ್ನು ನಿರ್ದೇಶಿಸಿದ್ದು ಆಗಸ್ಟ್ 7ರಂದು ರಂಗಶಂಕರದಲ್ಲಿ ಮೊಟ್ಟಮೊದಲ ಪ್ರಯೋಗವಾಯಿತು. ಸೂತ್ರದ ಬೊಂಬೆಗಳನ್ನು ನಿರೂಪಕರನ್ನಾಗಿಟ್ಟುಕೊಂಡು  ಮಲ್ಲಿಗೆ ಪರಿಮಳ ಸೂಸುವ ರಾಜನ ಕಥೆಯನ್ನು ಈ ನಾಟಕ ಹೇಳುತ್ತದೆ. ನಾಟಕದ ವಸ್ತು ವಿಷಯದ ಬಗ್ಗೆ ಅಭಿಪ್ರಾಯಬೇಧಗಳೇನೇ ಇದ್ದರೂ ಪ್ರಕಾಶ ಶೆಟ್ಟಿಯವರು ಕಟ್ಟಿಕೊಟ್ಟ ಈ ನಾಟಕವು ದೃಶ್ಯಕಾವ್ಯದಂತೆ ಮೂಡಿಬಂದಿದ್ದಂತೂ ಸತ್ಯ.


ಒಂದು ವರ್ಷಗಳ ಕಾಲ ಶ್ರಮವಹಿಸಿ ಈ ನಾಟಕವನ್ನು ಕಂತು ಕಂತಲ್ಲಿ ಬರೆದುಕೊಟ್ಟ ಕೆವೈಎನ್‌ರವರು ಎಲ್ಲಿಯೂ ಈ ನಾಟಕದ ಮೂಲ ಆಕರವನ್ನು ಬಿಟ್ಟುಕೊಡಲಿಲ್ಲ. ಬಹುತೇಕರು ಇದು ಕೆವೈಎನ್‌ರವರ ಕಲ್ಪನೆಯ ಮೂಸೆಯಿಂದ ಒಡಮೂಡಿದ ನಾಟಕವೆಂದುಕೊಂಡರು. ಒತ್ತಾಯಿಸಿ ಕೇಳಿದಾಗ ಜಾನಪದದ ಒಂದೆಳೆಯನ್ನು ಎತ್ತಿಕೊಂಡು ನಾಟಕ ಮಾಡಿದ್ದೇನೆಂದು ಕೆವೈಎನ್ ಹೇಳಿದರು. ಬೇರೆ ಆಕರಗಳಿಂದ ವಸ್ತುವನ್ನು ಪಡೆದು ಒಂದಿಷ್ಟು ತಿರುಚಿ ಬರೆದು ತಮ್ಮದೇ ನಾಟಕವೆಂದು ಕ್ಲೈಮ್ ಮಾಡಿಕೊಳ್ಳುವುದು ಕೆವೈಎನ್‌ರವರ ಪಾಂಡಿತ್ಯದ ಹಿಂದಿರುವ ಗುಟ್ಟು ಎನ್ನುವುದು ಕೆಲವೇ ಕೆಲವರಿಗೆ ಮಾತ್ರ ಗೊತ್ತಿರುವ ರಹಸ್ಯ. ಇದು ಹೇಗೆಂದರೆ ಎಲ್ಲೆಲ್ಲಿಯಿಂದಲೋ ಆಕರ ಪುಸ್ತಕಗಳನ್ನು ಓದಿ ಕೆಲವೊಂದಿಷ್ಟನ್ನು ಕಟ್ ಆಂಡ್ ಪೇಸ್ಟ್ ಮಾಡಿಕೊಂಡು ಥೀಸಸ್ ಒಂದನ್ನು ಬರೆದು ಡಾಕ್ಟರೇಟ್ ಪಡೆಯುವವರಂತೆ ಕೆವೈಎನ್ ಕೂಡಾ ನಾಟಕಗಳನ್ನು ಕಟ್ಟಿಕೊಡುತ್ತಾರಾ? ಗೊತ್ತಿಲ್ಲಾ. ಆದರೆ ಅಪಾರ ಪ್ರತಿಭಾವಂತರಾದ ಕೆವೈಎನ್ ರವರನ್ನು ಹಾಗೆಲ್ಲಾ ಕಟ್ ಆಂಡ್ ಪೇಸ್ಟ್ ಅಕಾಡೆಮಿಕ್ ಸಂಶೋಧಕರಿಗೆ ಹೋಲಿಸುವಂತಿಲ್ಲಾ. ಯಾಕೆಂದರೆ ನಾಟಕಕ್ಕೆ ಬೇಕಾದ ವಸ್ತು ವಿಷಯವನ್ನು ಎಲ್ಲಿಂದಲಾದರೂ ತೆಗೆದುಕೊಳ್ಳಲಿ ಅದಕ್ಕೆ ಚೆಂದನೆಯ ಉಡುಗೆ ತೊಡುಗೆ ತೊಡಿಸಿ ಆಕರ್ಷಣೀಯವಾಗಿಸಿ ನೋಡುಗರನ್ನು ಬೆರಗುಗೊಳಿಸುತ್ತಾರೆ. ಬಹುಷಃ ಕಳವು ಎನ್ನುವ ನಾಟಕ ಹೊರತುಪಡಿಸಿ ಅವರು ಬರೆದ ಬಹುತೇಕ ನಾಟಕಗಳು ಸಂಪೂರ್ಣ ಸ್ವಂತದ್ದಾಗಿರದೇ ಬೇರೆ ಆಕರಗಳಿಂದ ಪಡೆದದ್ದವುಗಳೇ ಆಗಿವೆ. ಅವರು ಬರೆದ ಸುಪ್ರಸಿದ್ದ ಅನಭಿಜ್ಞ ಶಾಕುಂತಲ ನಾಟಕವೂ ಸಹ ಆಶಾಡದ ಒಂದು ದಿನ ನಾಟಕದ ಸಾರಸತ್ವವನ್ನೇ ಅವಲಂಬಿಸಿ ವಿಭಿನ್ನ ನಿರೂಪಣೆ ಪಡೆದಿದೆ.

ಈ ಮಲ್ಲಿಗೆ ನಾಟಕದ ಕಥೆಯನ್ನು ಡಾ.ಕೆವೈಎನ್ ಪಂಡಿತರು ಅನಾಮತ್ತಾಗಿ ಎತ್ತಿಕೊಂಡಿದ್ದು ಡಾ.ಎ.ಕೆ.ರಾಮಾನುಜನ್‌ ರವರು ಸಂಗ್ರಹಿಸಿದ ಭಾರತೀಯ ಜನಪದ ಕತೆಗಳು ಪುಸ್ತಕದಿಂದ. ರಾಮಾನುಜನ್‌ರವರು ಭಾರತದ 22 ವಿವಿಧ ಭಾಷೆಗಳಿಂದ ಆಯ್ದ ಕೆಲವು ಜಾನಪದ ಕಥೆಗಳನ್ನು ಇಂಗ್ಲೀಷ್ ಭಾಷೆಯ ಈ ಕೃತಿಯಲ್ಲಿ ಸಂಗ್ರಹಿಸಿದ್ದಾರೆ. ಈ ಪುಸ್ತಕವನ್ನು ಮಹಬಲೇಶ್ವರರಾವ್ ರವರು ಕನ್ನಡಕ್ಕೆ ಅನುವಾದಿಸಿದ್ದು ನ್ಯಾಶನಲ್ ಬುಕ್ ಟ್ರಸ್ಟ್. ಪ್ರಕಟಿಸಿದೆ. ಈ ಸಂಗ್ರಹ ಪುಸ್ತಕದಲ್ಲಿ ತಮಿಳು ಭಾಷೆಯಿಂದಾಯ್ದುಕೊಂಡ ಕಥೆಯೇ ಮಲ್ಲಿಗೆ ನಗೆಯ ದೊರೆ. ಇದೇ ಕಥೆಯ ಮುಕ್ಕಾಲು ಭಾಗ ವಸ್ತುವನ್ನು ತೆಗೆದುಕೊಂಡು ಕಾಲು ಭಾಗ ತಮ್ಮ ಕಲ್ಪನೆಯನ್ನು ಸೇರಿಸಿಕೊಂಡು ಕೆವೈಎನ್‌ರವರು ಮಲ್ಲಿಗೆ ನಾಟಕವನ್ನು ಬರೆದಿದ್ದಾರೆ. ಅಂದರೆ ಈ ನಾಟಕ ನಾಟಕವಾಗಿರದೇ ಜಾನಪದ ಕಥೆಯ ರಂಗರೂಪವಾಗಿದೆ. ತಮಿಳು ಜಾನಪದ ಕಥೆಯಾಧಾರಿತ ಎಂದು ತಮ್ಮ ನಾಟಕ ಕೃತಿಯಲ್ಲಿ ಉಲ್ಲೇಖಿಸಿದ್ದರೆ.. ನಾಟಕ ಪ್ರದರ್ಶನದ ಬೋಷರ್, ಪೋಸ್ಟರ್ ಗಳಲ್ಲಿ ಬರೆದುಕೊಂಡಿದ್ದರೆ ಆ ಅನಾಮಿಕ ಜಾನಪದ ಕಥೆಗಾರನಿಗೆ ನ್ಯಾಯ ಸಲ್ಲಿಸಿದಂತಾಗುತ್ತಿತ್ತು. ಇಲ್ಲವೇ ಈ ಕಥೆಯನ್ನು ಸಂಗ್ರಹಿಸಿದ ರಾಮಾನುಜನ್‌ರವರ ಹೆಸರನ್ನಾದರೂ ಹಾಕಬಹುದಾಗಿತ್ತು. ಆದರೆ.. ಗುಡಿ ಕಟ್ಟಿದವರನ್ನು ಬಿಟ್ಟು ಗೋಪುರ ಇಟ್ಟವರನ್ನು ದೇವಸ್ಥಾನದ ರೂವಾರಿಗಳು ಅಂದ ಹಾಗಾಯ್ತು. ಯಾರೋ ಹುಟ್ಟಿಸಿದ ಕೂಸಿಗೆ ಕುಲಾಯಿ ಹಾಕಿ ತನ್ನದೇ ಮಗು ಅಂದ ಹಾಗಾಯ್ತು. ಕ್ರಿಯಾಶೀಲತೆ ಅಂದ್ರೆ ಇದೇನಾ? ಯಾವುದೋ ಮೂಲದಿಂದ ಪ್ರೇರಣೆ ಪಡೆದು ತಮ್ಮದೇ ಸೃಷ್ಟಿ ಎನ್ನುವುದು ಪಾಂಡಿತ್ಯಾನಾ?  

ಹೀಗೆ ಮೂಲವನ್ನು ಬಚ್ಚಿಟ್ಟು ತಮ್ಮದಾಗಿಸಿಕೊಳ್ಳುವುದೂ ಸಹ ಒಂದು ಕಲೆ. ಡಾ.ಚಂದ್ರಶೇಖರ ಕಂಬಾರರು ಇಂತಹ ಕಲೆಯಲ್ಲಿ ನಿಷ್ಣಾತರು. ಸಾಹಿತ್ಯ ಹಾಗೂ ಕಾವ್ಯದ ಹಿನ್ನೆಲೆಯಿಂದ ಬಂದ ಕೆವೈಎನ್ ಆಗಲಿ ಇಲ್ಲವೇ ಕಂಬಾರರಾಗಲಿ ನಾಟಕೀಯ ವಸ್ತುವಿರುವ ಯಾವುದೇ ವಸ್ತು ವಿಷಯ ಕಥೆ ಕಾವ್ಯಗಳ ಹೊಳಹುಗಳು ಸಿಕ್ಕರೆ ಅವುಗಳನ್ನೆತ್ತಿಕೊಂಡು ನಾಟಕವಾಗಿಸುತ್ತಾರೆ. ಇದು ತಪ್ಪೂ ಅಲ್ಲಾ.. ಕೃತಿಚೌರ್ಯವಂತೂ ಮೊದಲೇ ಅಲ್ಲಾ. ಆದರೆ.. ನಾಟಕ ಬರೆದ ನಂತರ ಮೂಲ ಆಕರವನ್ನು ಹೇಳಿಕೊಳ್ಳುವುದು ನೈತಿಕತೆ ಎನಿಸುತ್ತದೆ. ಉದಾಹರಣೆಗೆ ಕಂಬಾರರ ಬೋಳೇಶಂಕರ ನಾಟಕ. ಇದು ಲಿಯೋ ಟಾಲಸ್ಟಾಯ್ ಕಥೆಯ ರೂಪಾಂತರದ ನಾಟಕ. ಆದರೆ ಕಂಬಾರರು ಎಲ್ಲೂ ಲಿಯೋಟಾಲ್ಟಾಯಿಗೆ ಕ್ರೆಡಿಟ್ ಕೊಡದೇ ಸಂಪೂರ್ಣ ನಾಟಕ ತಮ್ಮದೇ ಎಂಬಂತೆ ಪ್ರಚರ ಪಡಿಸಿದರು. ಇದು ಎಂತಹ ಅನಾಹುತಕ್ಕೆ ಕಾರಣವಾಯಿತು ಎಂದರೆ. ಟಾಲಸ್ಟಾಯ್‌ರವರ ಕಥೆಯನ್ನು ಓದಿ ಪ್ರೇರಣೆಗೊಳಗಾದ ವಿಜಯನಗರ ಬಿಂಬದ ಡಾ.ಕಷ್ಯಪ್ ಅದೇ ಕಥೆಯನ್ನು ರಂಗರೂಪಗೊಳಿಸಿ ಮಕ್ಕಳಿಂದ ಆಡಿಸಿಬಿಟ್ಟರು. ಕಷ್ಯಪ್‌ರವರಿಗೂ ಗೊತ್ತಿರಲಿಲ್ಲಾ ಈ ಕಥೆ ಈಗಾಗಲೇ ಬೊಳೇಶಂಕರ ಎನ್ನುವ ನಾಟಕವಾಗಿದೆ ಎಂದು. ಯಾಕೆಂದರೆ ಕಂಬಾರರಾಗಲೀ ಇಲ್ಲವೇ ಕಷ್ಯಪ್ ಆಗಲೀ ತಮ್ಮ ನಾಟಕದ ಮೂಲ ಕಥೆಗಾರನಿಗೆ ಪ್ರಾಶಸ್ತ್ಯ ಕೊಡಲೇ ಇಲ್ಲಾ. ಬದುಕಿಲ್ಲದ ಟಾಲಸ್ಟಾಯ್ ಬಂದು ಯಾಕೆಂದು ಕೇಳಲು ಸಾಧ್ಯವೇ ಇಲ್ಲಾ. ಜಾನಪದಕ್ಕೆ ಹಕ್ಕುದಾರಿಕೆಯನ್ನು ಯಾರೂ ಕೇಳಲು ಆಗುವುದೂ ಇಲ್ಲಾ. ಇದು ಕೇವಲ ಕಂಬಾರರಾಗಲೀ ಕೆವೈಎನ್ ರವರಾಗಲಿ ಮಾಡಿದ ಕೆಲಸವಲ್ಲ. ಗಿರೀಶ್ ಕಾರ್ನಾಡರೂ ಸಹ ಹೀಗೆ ಮೂಲದ ಹೆಸರುಗಳನ್ನು ಹೇಳದೇ ಕಥೆಗಳನ್ನು ಅಡಾಪ್ಟ್ ಮಾಡಿಕೊಂಡು ನಾಟಕ ಬರೆದಿದ್ದಾರೆ.

ಇವು ಸ್ವತಂತ್ರ ನಾಟಕಗಳೂ ಅಲ್ಲಾ,  ಸಂಪೂರ್ಣ ರೂಪಾಂತರಗೊಂಡ ನಾಟಕಗಳೂ ಅಲ್ಲಾ. ಒಂದು ರೀತಿಯಲ್ಲಿ ಅತಂತ್ರ ನಾಟಕಗಳು. ಯಾಕೆಂದರೆ ಮೂಲದಿಂದ ಒಂದಿಷ್ಟು ಪಡೆದು ಅದಕ್ಕೆ ಬೇರೆಯದೇ ಆದ ನಿರೂಪಣೆಯನ್ನು ಒದಗಿಸಿ ವಿಭಿನ್ನ ನಾಟಕವನ್ನು ಕಟ್ಟಿಕೊಡುವುದೂ ಒಂದು ಸೋಜಿಗದ ಕಲೆ. ಆದರೆ ಅದೆಷ್ಟೇ ಮೂಲವನ್ನು ಮರೆಮಾಚಿದರೂ ಒಂದಿಲ್ಲೊಂದು ದಿನ ಅದು ಗೊತ್ತಾಗದೇ ಇರದು. ಕೆವೈಎನ್ ತಮ್ಮ ಅನಭಿಜ್ಞ ಶಾಕುಂತಲ ನಾಟಕದ ಎಳೆ ತೆಲಗು ಮೂಲದ ಜಾನಪದ ಹಾಡಿನದ್ದೆಂದು ಅದೆಷ್ಟೇ ಬಿಂಬಿಸಲು ಪ್ರಯತ್ನಪಟ್ಟರೂ ಆ ನಾಟಕದ ಮೂಲ ಇರುವುದು ಆಶಾಡದ ಒಂದು ದಿನದಲ್ಲಿ ಎನ್ನುವುದು ನಿರ್ವಿವಾದ. ಇದ್ದದ್ದನ್ನು ಇದ್ದಂಗೆ ಹೇಳಿದರೆ ಈ ಪಂಡಿತರಿಗೆ ಯಾವ ನಷ್ಟವಂತೂ ಇಲ್ಲವೇ ಇಲ್ಲಾ. ತಮಿಳು ಜಾನಪದದ ಕಥೆ ಆಧಾರಿತವೆಂದೋ ಇಲ್ಲವೇ ಜಾನಪದ ಕಥೆಯ ರಂಗರೂಪ ಎಂದೋ ಹೇಳಿಕೊಂಡು ನಾಟಕದ ಕೃತಿ, ಪೋಸ್ಟರ್ ಹಾಗೂ ಬೋಷರ್‌ಗಳಲ್ಲಿ ಹೇಳಿಬಿಟ್ಟರೆ ಯಾವ ಸಮಸ್ಯೆಯೂ ಇರುವುದಿಲ್ಲಾ. ಆದರೆ.. ಸಾಧ್ಯವಾದಷ್ಟೂ ಮೂಲವನ್ನು ಮುಚ್ಚಿಟ್ಟೋ ಇಲ್ಲವೇ ದಿಕ್ಕುತಪ್ಪಿಸಿಯೋ ಸದರಿ ನಾಟಕ ತಮ್ಮದೇ ಸೃಷ್ಟಿ ಎಂದು ಕ್ಲೈಮ್ ಮಾಡಿಕೊಳ್ಳುವುದು ಪಾಂಡಿತ್ಯಕ್ಕೆ ಶೋಭೆತರುವಂತಹುದಂತೂ ಅಲ್ಲವೇ ಅಲ್ಲಾ. ನಾಟಕದ ಮೂಲ ಹಾಗೂ ಮರ್ಮ ಅರಿಯದ ಈ ಪಂಡಿತರ ಭಕ್ತಮಂಡಳಿ ನಾಟಕದ ಕ್ರೆಡಿಟ್ಟನ್ನು ಸಂಪೂರ್ಣವಾಗಿ ಕೆವೈಎನ್‌ರವರಿಗೆ ಕೊಟ್ಟು ಉಧೋ ಉಧೋ ಎನ್ನುವುದು ಇನ್ನೂ ಅಕ್ಷಮ್ಯ. ಏನೇ ಇರಲಿ, ಕದ್ದುಕೊಂಡೋ,, ತೆಗೆದುಕೊಂಡೋ.. ಆಡಾಪ್ಟ್ ಮಾಡಿಕೊಂಡೋ.. ಕಟ್ ಆಂಡ್ ಪೇಸ್ಟ್ ಮಾಡಿಯೋ.. ಹೇಗೋ ಹೊಸ ನಾಟಕಗಳನ್ನು ಆಧುನಿಕ ಕನ್ನಡ ರಂಗಭೂಮಿಗೆ ಕೊಟ್ಟರಲ್ಲಾ ಎನ್ನುವುದೇ ಸಮಾಧಾನಕರ ಹಾಗೂ ಸಂತಸದ ಸಂಗತಿ.   

             -ಶಶಿಕಾಂತ ಯಡಹಳ್ಳಿ     




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ