ಗುರುವಾರ, ಜುಲೈ 28, 2016

ಕಲಬುರ್ಗಿ, ಶಿವಮೊಗ್ಗ ರಂಗಾಯಣಗಳ ಕರ್ಮಕಾಂಡಕ್ಕೊಂದು ಅಂತ್ಯ :


ಅಸಮರ್ಥ ನಿರ್ದೇಶಕರಿಂದ ರಂಗಾಯಣಕ್ಕೆ ಮುಕ್ತಿ ; ಕೊನೆಗೂ ಇಲಾಖೆ ತೋರಿಸಿತು ತನ್ನ ಶಕ್ತಿ :


ಅಂತೂ ಇಂತೂ ಕಲಬುರ್ಗಿ ಹಾಗೂ ಶಿವಮೊಗ್ಗ ರಂಗಾಯಣಗಳ ಪ್ರತಿನಿತ್ಯದ ಅತಿರೇಕದ ರಗಳೆಗಳಿಗೆ ಸದ್ಯಕ್ಕೆ ಪರಿಹಾರ ದೊರಕಿದಂತಾಯಿತು. ಕಲಬುರ್ಗಿ ರಂಗಾಯಣದ ನಿರ್ದೇಶಕರಾದ ಪ್ರೊ.ಆರ್.ಕೆ.ಹುಡುಗಿಯವರನ್ನು ಹಾಗೂ ಶಿವಮೊಗ್ಗ ರಂಗಾಯಣದ ಇಕ್ಬಾಲ್ ಅಹಮದ್‌ರನ್ನು ನಿರ್ದೇಶಕ ಹುದ್ದೆಯಿಂದ ಸರಕಾರ ವಜಾಗೊಳಿಸಿದೆ.  ಸರಕಾರದ ಮನವಿಯಂತೆ ರಾಜ್ಯಪಾಲರ ಆದೇಶದ ಅನುಸಾರ ಈ ಇಬ್ಬರನ್ನೂ ವಜಾಗೊಳಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನ ಕಾರ್ಯದರ್ಶಿ ಜಿ.ಅನ್ನಪೂರ್ಣರವರು ಜುಲೈ 26 ರಂದು ಆದೇಶ ಹೊರಡಿಸಿದರು. ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ಕೇಂದ್ರ ರಂಗಾಯಣದ ಪ್ರಮುಖ ಭಾಗವೇ ಆಗಿದ್ದ ಕಲಬುರ್ಗಿ ಹಾಗೂ ಶಿವಮೊಗ್ಗ ರಂಗಾಯಣಗಳ ಮರ್ಯಾದೆ ಮೂರು ಕಾಸಿಗೆ ಸಾಂಸ್ಕೃತಿಕ ಸಂತೆಯಲ್ಲಿ ಹರಾಜಾದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಒತ್ತಡಕ್ಕೊಳಗಾಗಿ ಕೊನೆಗೂ ಹಠಮಾರಿ ನಿರ್ದೇಶಕರುಗಳನ್ನು ಹುದ್ದೆಗಳಿಂದ ತೆರವುಗೊಳಿಸಿ ಮನೆಯ ದಾರಿ ತೋರಿಸಿದೆ. ಕಲಬುರ್ಗಿ ರಂಗಾಯಣದ ಸಮಸ್ಯೆಗಳಿಗೆ ನಿರ್ದೇಶಕ ಹಾಗೂ ಕಲಾವಿದರೆಲ್ಲಾ ಕಾರಣರಾಗಿ ಅಲ್ಲಿ ಭಯದ ವಾತಾವರಣ ಉಂಟಾಗಿದ್ದರಿಂದ ಇವರೆಲ್ಲರನ್ನೂ ರಂಗಾಯಣದ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಅದೆಷ್ಟೇ ಆರೋಪಗಳು ಬಂದರೂ, ಇಲಾಖೆ ಹಾಗೂ ರಂಗಸಮಾಜದ ವಿಚಾರಣೆಗಳಲ್ಲಿ ತಪ್ಪಿತಸ್ತರೆಂದು ಸಾಬೀತಾದರೂ ಖುರ್ಚಿ ಬಿಟ್ಟುಕೊಡಲು ಸಿದ್ಧರಿಲ್ಲದ ಈ ನಿರ್ದೇಶಕರುದ್ವಯರನ್ನು ಮನೆಗೆ ಕಳುಹಿಸಲು ಸರಕಾರಕ್ಕೆ ಸರಕಾರವೇ ತಿಣುಕಿ ಹೋಯಿತು. ಸಾಂಸ್ಕೃತಿಕ ರಾಜಕಾರಣ ಪಕ್ಷ ರಾಜಕಾರಣವಾಗಿ ಪರಿವರ್ತನೆಗೊಂಡು ಆಳುವ ಸರಕಾರಕ್ಕೆ ಸವಾಲೆಸೆದು ನಿಂತ ಈ ನಿರ್ದೇಶಕರುಗಳನ್ನು ನಿಭಾಯಿಸಲು ಹಾಗೂ ವಜಾಗೊಳಿಸಲು ಅಜಮಾಸು ಆರು ತಿಂಗಳುಗಳೇ ಬೇಕಾಯಿತು.

ಕಲಬುರ್ಗಿ ರಂಗಾಯಣದ ನಿರ್ದೇಶಕರ ಬಂಡಾಟ, ಕಲಾವಿದರುಗಳು ಮೊಂಡಾಟ ಹಾಗೂ ಸರಕಾರದ ರಾಜಕೀಯದಾಟದ ನಡುವೆ ಮೊದಲ ಸಲ ಅಸ್ತಿತ್ವಕ್ಕೆ ಬಂದಿದ್ದ ಕಲಬುರ್ಗಿ ರಂಗಾಯಣ ಆರಂಭದಿಂದಲೂ ಅನಾರೋಗ್ಯಕರವಾಗಿತ್ತು. ಹಾವೂ ಸಾಯುತ್ತಿಲ್ಲ, ಕೋಲೂ ಮುರಿಯುತ್ತಿಲ್ಲ ಎನ್ನುವಂತಾಗಿ ರಂಗಾಯಣದ ಆಟ ದಿನಕ್ಕೊಂದು ತಿರುವು ಪಡೆಯುತ್ತಾ ಕಲಬುರ್ಗಿ ಜನರಲ್ಲಿ ರೇಜಿಗೆ ಹುಟ್ಟಿಸಿತ್ತು.

ಪ್ರೊ.ಆರ್.ಕೆ.ಹುಡಗಿ

ಈ ಕಲಬುರ್ಗಿ ರಂಗಾಯಣದ ನಿರ್ದೇಶಕರಾದ ಪ್ರೊ.ಆರ್.ಕೆ.ಹುಡುಗಿಯವರ ಮೇಲೆ ಜಾತಿನಿಂದನೆ ಹಾಗೂ ಲೈಂಗಿಕ ಕಿರುಕುಳ ಎನ್ನುವ ಗಂಭೀರ ಆರೋಪ ಮಾಡಿದ ರಂಗಾಯಣದ ಕಲಾವಿದರುಗಳು ಹುಡುಗಿ ಹಟಾವೋ ರಂಗಾಯಣ ಬಚಾವೋ ಪ್ರತಿಭಟನೆಯನ್ನು ಕಳೆದ ಆರು ತಿಂಗಳಿಂದ ಮಾಡುತ್ತಲೇ ಬಂದಿದ್ದರು. ಹುಡುಗಿಯವರ ಮೇಲೆ ರಂಗಾಯಣದ ಕಲಾವಿದರು ಅಟ್ರಾಸಿಟಿ ಕೇಸ್ ಜಡಿದು ಪೋಲೀಸ್ ಕಂಪ್ಲೆಂಟ್ ಕೊಟ್ಟಿದ್ದೂ ಆಯಿತು. ಪೊಲೀಸ್ ಅಧಿಕಾರಿಗಳಿಂದ ತನಿಖೆಯಾಗಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ರಂಗಸಮಾಜದ ಕಮಿಟಿಯೂ ಸಹ ಹುಡುಗಿ ಮಾಸ್ತರರ ಹುಡುಗಾಟವನ್ನು ವಿವರವಾಗಿ ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿತ್ತು. ಆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾತ್ರ ಯಾವುದೇ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಗದೇ ವಿಳಂಬನೀತಿಯನ್ನು ಅನುಸರಿಸುತ್ತಲೇ ಬಂದಿತು.


ಸಚಿವೆ ಉಮಾಶ್ರೀಯವರ ಅಧ್ಯಕ್ಷತೆಯಲ್ಲಿ ಸಭೆಗಳ ಮೇಲೆ ಸಭೆಗಳಾದವು. ಪ್ರತಿ ಸಭೆಯಲ್ಲೂ ಸಹ ಸಚಿವೆಯ ನಿರ್ಣಯ ಒಂದೇ. ಅದು ಒಂದು ವಾರದೊಳಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಆದರೆ ಆ ಒಂದು ವಾರಕ್ಕಾಗಿ ಕಾಯ್ದು ಬೇಸತ್ತ ರಂಗಸಮಾಜದ ಸದಸ್ಯರೆಲ್ಲಾ ಒಕ್ಕೋರಲಿನಿಂದ ರಾಜೀನಾಮೆಗಳನ್ನು ಇಲಾಖೆಗೆ ಸಲ್ಲಿಸುವ ನಿರ್ಣಯವನ್ನು ಜುಲೈ 13 ರಂದು ತೆಗೆದುಕೊಂಡರು. ಆಗಲೂ ಸಹ ಸಂಸ್ಕೃತಿ ಇಲಾಖೆಯ ಸೆಕ್ರೇಟರಿ ಮೂಲಕ ಬಂದ ಮೌಖಿಕ ಆದೇಶವೇನೆಂದರೆ ಇನ್ನೊಂದು ವಾರದೊಳಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂಬುದು. ಮತ್ತೊಂದು ವಾರ ಕಳೆದರೂ ನಿರ್ದಾರ ಮಾತ್ರ ಪ್ರಕಟಗೊಳ್ಳಲಿಲ್ಲ. ಸರಕಾರದ ವಿಳಂಬ ಧೋರಣೆಯಿಂದ ಬೇಸತ್ತ ರಂಗಾಯಣದ ಕಲಾವಿದರುಗಳು ಭರವಸೆಯನ್ನೇ ಕಳೆದುಕೊಂಡು ದಿನಗಳನ್ನು ದೂಡುತ್ತಿದ್ದರೆ.. ರಂಗಸಮಾಜದ ಸದಸ್ಯರುಗಳು ಭ್ರಮನಿರಸಗೊಂಡು ಸಾಮೂಹಿಕ ರಾಜೀನಾಮೆ ಕೊಡುವ ನಿರ್ಧಾರಕ್ಕೆ ಬಂದರು.

ಯಾವಾಗ ರಂಗಸಮಾಜದ ಸದಸ್ಯರುಗಳು ರಾಜಿನಾಮೆ ಕೊಡುವ ನಿರ್ಧಾರ ಹುಡಗಿ ಮಾಸ್ತರರಿಗೆ ಗೊತ್ತಾಯಿತೋ ಆಗ ಅವರು ತಮ್ಮ ಗಾಡ್‌ಪಾದರ್ ಖರ್ಗೆಯವರನ್ನು ಸಂಪರ್ಕಿಸಿದರು. ದೆಹಲಿಯಲ್ಲಿದ್ದ ಖರ್ಗೆಯವರಿಗೆ ಸಂಪರ್ಕ ಸಿಗದೇ ಹೋದಾಗ ಕಲಬುರ್ಗಿಯ ದಲಿತ ಸಂಘಟನೆಗಳ ಮುಖಂಡರ ಮೊರೆಹೋದರು. ವಿಠ್ಠಲ್ ದೊಡಮನಿ, ನಿಂಬಾಳ್ಕರ್ ಮುಂತಾದ ಮಹನೀಯರು ಪ್ರೆಸ್‌ನೋಟ್ ಕೊಟ್ಟು ರಂಗಸಮಾಜದ ಸದಸ್ಯರ ರಾಜೀನಾಮೆ ನಿರ್ಣಯವನ್ನು ಖಂಡಿಸಿ ಹೇಳಿಕೆ ನೀಡಿದರು. ಜೊತೆಗೆ ನೇರವಾಗಿ ಸಚಿವೆ ಉಮಾಶ್ರೀಯವರಿಗೂ ಪತ್ರ ಬರೆದರು. ನಿರ್ದೇಶಕರ ಕಾರ್ಯವೈಖರಿ ಗ್ಗೆ ಇಲ್ಲಿಯ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ದೂರು ಸಲ್ಲಿಸಿದ್ದಾರೆಯೇ? ಈ ಭಾಗದ ಹಿರಿಯ ನಾಯಕರಾದ ಖರ್ಗೆಯವರು ಅಭಿಪ್ರಾಯ ಸೂಚಿಸಿದ್ದಾರೆಯೇ? ಎಂದೆಲ್ಲಾ ರಂಗಾಯಣಕ್ಕೆ ಸಂಬಂಧವಿಲ್ಲದ ಬಾಲಿಷ ಪ್ರಶ್ನೆಗಳನ್ನು ಬರೆದು ಸಚಿವೆಗೆ ರವಾಣಿಸಿದರು. ಇಲ್ಲಿಯ ಮೇಲ್ಚಾತಿಯವರನ್ನು ದಲಿತರ ವಿರುದ್ಧ ಎತ್ತಿ ಕಟ್ಟುವ ಹುನ್ನಾರವಾಗಿದೆ ಎನ್ನುವ ಆರೋಪವನ್ನೂ ಈ ದಲಿತಪರ ಸಂಘಟನೆಗಳ ನಾಯಕರು ಮಾಡಿದರು. ಹುಡುಗಿಯವರನ್ನು ವಜಾಗೊಳಿಸದಿದ್ದರೆ ರಾಜೀನಾಮೆ ಕೊಡುವುದಾಗಿ ಹೇಳಿರುವ ರಂಗಸಮಾಜದ ಸದಸ್ಯರುಗಳು ಸರಕಾರವನ್ನೇ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಂದೂ ಆರೋಪಿಸಿದರು. ಕೊನೆಗೆ ರಂಗಸಮಾಜದವರ ಒತ್ತಡಕ್ಕೆ ಮಣಿದು ಹುಡಗಿ ವಿರುದ್ಧ ಕ್ರಮ ತೆಗೆದುಕೊಂಡರೆ ಈ ಭಾಗದ ದಲಿತರು ಹಾಗೂ ಮೇಲ್ಚಾತಿಯವರ ನಡುವಿನ ಸೌಹಾರ್ದತೆಯನ್ನು ಕದಡಿದಂತಾಗುತ್ತದೆ ಎಂದು ಮಿಠಲ್ ದೊಡ್ಡಮನಿ ಎನ್ನುವ ದಲಿತ ಮುಖಂಡ ಸರಕಾರಕ್ಕೆ ಎಚ್ಚರಿಕೆಯನ್ನೂ ಕೊಟ್ಟಿದ್ದಾಯಿತು.

ಹುಡುಗಿಯವರ ಗುಣಗಾಣ ಮಾಡಿ, ರಂಗಸಮಾಜದ ಸದಸ್ಯರನ್ನು ಬೈದು,  ಸರಕಾರವನ್ನೇ ಬ್ಲಾಕ್‌ಮೇಲ್ ಮಾಡಿ, ಇಲ್ಲದ ವರ್ಗಸಂಘರ್ಷದ ಆರೋಪವನ್ನು ಸೃಷ್ಟಿಸಿ ಬರೆದ ಪತ್ರಿಕಾ ಹೇಳಿಕೆ ಹಾಗೂ ಉಮಾಶ್ರೀಯವರಿಗೆ ಬರೆದ ಪತ್ರಗಳನ್ನು ಸ್ವತಃ ಹುಡಗಿಯವರೇ ಡ್ರಾಪ್ಟ್ ಮಾಡಿದ್ದು ಎನ್ನುವುದು ಕಲಬುರ್ಗಿ ಸಾಂಸ್ಕೃತಿಕ ವಲಯದಲ್ಲಿ ಪ್ರಭಲವಾಗಿ ಕೇಳಿಬಂದ ಸುದ್ದಿಯಾಗಿದೆ. ಹೀಗೆ.. ಹುಡಗಿ ತಾವೇ ಮಾಡಿಕೊಂಡ ಸ್ವಯಂಕೃತಪರಾದವನ್ನು ಮರೆಮಾಚಿ ದಲಿತ ಸಂಘಟನೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದು ಮಹಾಪರಾಧವೇ ಆಗಿದೆ. ಅದಕ್ಕಿಂತ ದೊಡ್ಡ ಪಾತಕವೇನೆಂದರೆ ತಮ್ಮ ನಿರ್ದೇಶಕ ಸ್ಥಾನವನ್ನು ಉಳಿಸಿಕೊಳ್ಳಲು ಹುಡಗಿಯವರನ್ನು ವಜಾಮಾಡಿದರೆ ದಲಿತರು ಹಾಗೂ ಮೇಲ್ಚಾತಿಯವರ ಸೌಹಾರ್ದ ಕದಡುತ್ತದೆ ಎನ್ನುವ ಹುಸಿ ವದಂತಿಯನ್ನು ಹುಟ್ಟಿಹಾಕಲು ಪ್ರಯತ್ನಿಸಿದ್ದು. ಎಡಪಂಥೀಯ ಹಿನ್ನೆಲೆಯಿಂದ ಬಂದ ಕಾಮ್ರೇಡ್ ಒಬ್ಬರು ತಮ್ಮ ಸ್ವಹಿತಾಸಕ್ತಿಗಾಗಿ ಸಾಮಾಜಿಕ ಸಂಘಟನೆಗಳನ್ನು ಬಳಸಿಕೊಂಡಿದ್ದು ಖಂಡನೀಯವಾಗಿದೆ. ದಲಿತ ಕಲಾವಿದರ ಮೇಲಾದ ಜಾತಿನಿಂದನೆಯ ಪರವಾಗಿ ನಿಲ್ಲಬೇಕಾದ ದಲಿತ ಸಂಘಟನೆಗಳ ನಾಯಕರುಗಳು ಮೇಲ್ಚಾತಿಯ ಹುಡಗಿಯವರ ಪರವಾಗಿ ನಿಂತು ತಮ್ಮ ಅವಕಾಶವಾದಿತನವನ್ನು ಜಾಹೀರುಗೊಳಿಸಿದ್ದರು. ರಂಗರಾಜಕೀಯವನ್ನು ಜಾತಿರಾಜಕೀಯವನ್ನಾಗಿ ಪರಿವರ್ತಿಸಿದ ಕೀರ್ತಿ ಹುಡಗಿಯವರಿಗೆ ಸಲ್ಲಬೇಕಿದೆ.

ಹೇಗಾದರೂ ಮಾಡಿ ಹುಡಗಿಯವರನ್ನು ಕಲಬುರ್ಗಿ ರಂಗಾಯಣದಿಂದ ಹೊರಹಾಕಲು ಸಚಿವೆ ಉಮಾಶ್ರೀಯವರು ಅವಕಾಶಕ್ಕಾಗಿ ಕಾಯುತ್ತಲಿದ್ದರಾದರೂ ರಾಜಕೀಯದ ಒತ್ತಡಕ್ಕೊಳಗಾಗಿ ಅಸಹಾಯಕರಾಗಿದ್ದರು. ಹುಡಗಿ ಸಾಹೇಬರು ಮಲ್ಲಿಕಾರ್ಜುನ ಖರ್ಗೆಯವರ ಬೆಂಬಲ ಹಾಗೂ ಕೆಲವು ಸಂಘಟನೆಗಳ ಸಹಕಾರದಿಂದ ತಮ್ಮನ್ನು ಯಾರೂ ಏನೂ ಮಾಡಲು ಸಾಧ್ಯವೇ ಇಲ್ಲ ಎಂದು ಬಹಿರಂಗವಾಗಿಯೇ ಕೊಚ್ಚಿಕೊಳ್ಳುತ್ತಿದ್ದರು. ರಂಗಾಯಣದ ಖುರ್ಚಿ ಉಳಿಸಿಕೊಳ್ಳಲು ತಮ್ಮ ಹಿಂದಿನ ಗೌರವ, ವಯಸ್ಸಿನ ಮರ್ಯಾದೆ ಎಲ್ಲವನ್ನೂ ಪಣವಾಗಿಟ್ಟು ಪ್ರಯತ್ನಿಸತೊಡಗಿದರು.  ಲೈಂಗಿಕ ಕಿರುಕಳ ಹಾಗೂ ಜಾತಿ ನಿಂದನೆ ಕುರಿತು ಕಲಾವಿದರಿಂದ ಆರೋಪ ಬಂದ ತಕ್ಷಣವೇ ರಾಜೀನಾಮೆ ಕೊಟ್ಟಿದ್ದರೆ ಹುಡಗಿ ಮಾಸ್ತರರ ಮರ್ಯಾದೆಯಾದರೂ ಒಂದಿಷ್ಟು ಉಳಿಯುತ್ತಿತ್ತು. ಆದರೆ ಯಾವಾಗ ಹಠಕ್ಕೆ ಬಿದ್ದು ತಮ್ಮ ಅಧಿಕಾರದಾಸೆಗೆ ವಾಮಮಾರ್ಗಗಳನ್ನು ಹಿಡಿದು ರಾಜಕೀಯ ಶುರುಮಾಡಿದರೋ ಆಗ ಹುಡಗಿಯವರನ್ನು ಗೌರವಿಸುವವರಲ್ಲೂ ಸಹ ಅಸಹನೆ ಮೂಡಿದ್ದಂತೂ ಸತ್ಯ.

ದಲಿತ ಸಂಘಟನೆಗಳನ್ನು ಸರಕಾರದ ವಿರುದ್ಧ ಎತ್ತಿಕಟ್ಟಿದ ಸುದ್ದಿ ಸಿದ್ದರಾಮಯ್ಯನವರಿಗೆ ಉಮಾಶ್ರೀಯವರ ಮೂಲಕ ಗೊತ್ತಾಗಿ ಸಿಎಂ ಕೆಂಡಾಮಂಡಲವಾದರು. ಈಗಷ್ಟೇ ಮಂತ್ರಿಮಂಡಲದಲ್ಲಿ ಮೇಜರ್ ಬದಲಾವಣೆ ಮಾಡಿ ದಲಿತ ಸಿಎಂ ಎನ್ನುವ ಸಿದ್ದು ವಿರೋಧಿಗಳ ಪ್ರಚಾರಕ್ಕೆ ಪೆಟ್ಟುಕೊಟ್ಟು ತಮ್ಮ ಬಲವನ್ನು ಹೆಚ್ಚಿಸಿಕೊಂಡಿದ್ದ ಸಿದ್ದರಾಮಯ್ಯನವರು ಖರ್ಗೆಯವರಿಗೆ ಮೊದಲಿನಂತೆ ಹೆದರುವ ಅಗತ್ಯತೆಯೂ ಈಗಿರಲಿಲ್ಲ. ಮಂತ್ರಿಮಂಡಲದಲ್ಲಿ ಸೀನಿಯಾರಿಟಿ ಮೀರಿ ತಮ್ಮ ಮಗನನ್ನು ಮಂತ್ರಿಯಾಗಿಸಿದ್ದ ಖರ್ಗೆಯವರು ಸಿದ್ದರಾಮಯ್ಯನವರನ್ನು ವಿರೋಧಿಸುವ ದ್ವನಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಮುಖ್ಯಮಂತ್ರಿಯವರಿಂದ ಗ್ರೀನ್ ಸಿಗ್ನಲ್ ಪಡೆದ ಉಮಾಶ್ರೀಯವರು ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶಕರ ಹಾಗೂ ಕಲಾವಿದರ ವಜಾ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಆದೇಶಿಸಿದರು. ನಾಲ್ಕೇ ದಿನಗಳಲ್ಲಿ ರಾಜ್ಯಪಾಲರ ಒಪ್ಪಿಗೆಯನ್ನೂ ಪಡೆದು ಹುಡಗಿ ಮಾಸ್ತರರ ಜೊತೆಗೆ ಕಲಬುರ್ಗಿ ರಂಗಾಯಣದ ಕಲಾವಿದರುಗಳೆಲ್ಲರ ವಜಾ ಆದೇಶ ಹೊರಬಿದ್ದಿತು.

ಕಲಬುರ್ಗಿ ರಂಗಾಯಣ ಹುಟ್ಟಿ ಗಟ್ಟಿಗೊಳ್ಳುವ ಮೊದಲೇ ಅದರ ನಾಶಕ್ಕೆ ಹುಡಗಿ ಮಾಸ್ತರರ ಕೊಡುಗೆಯಷ್ಟೇ ಅಷ್ಟೇ ಅಲ್ಲ, ಅಲ್ಲಿಯ ಕಲಾವಿದರುಗಳೂ ಕಾರಣರಾಗಿದ್ದಾರೆ. ವಿವೇಚನೆ ಇಲ್ಲದೇ, ಹೋರಾಟದ ಸ್ಪಷ್ಟತೆ ಇಲ್ಲದೇ ಯಾರ‍್ಯಾರದೋ ಮಾತುಗಳನ್ನು ಕೇಳಿ ಬೀದಿಗಿಳಿದು ಸರಣಿ ಧರಣಿ ಸತ್ಯಾಗ್ರಹಗಳನ್ನು ಮಾಡಿ ರಂಗಾಯಣದ ಮರ್ಯಾದೆಯನ್ನು ಹಾದಿಬೀದಿಯಲ್ಲಿ ಹರಾಜು ಹಾಕಿದ ಕೀರ್ತಿ ಅಲ್ಲಿಯ ಅವಿವೇಕಿ ಕಲಾವಿದರುಗಳಿಗೂ ಸಲ್ಲಲೇಬೇಕು. ಹುಡಗಿ ಹಠಾವೋ ಎನ್ನುವ ಒಂದೇ ಅಜೆಂಡಾ ಇಟ್ಟುಕೊಂಡು ಹೋರಾಟಕ್ಕಿಳಿದ ಕಲಾವಿದರುಗಳು ತಮ್ಮ ಸೇಡಿನ ಕಿಚ್ಚಿಗೆ ತಾವೂ ಬಲಿಯಾದರು. ಹುಡಗಿ ಮಾಸ್ತರರ ಜೊತೆಗೆ ಎಲ್ಲಾ ಕಲಾವಿದರುಗಳನ್ನು ಹೋಲ್‌ಸೇಲ್ ಆಗಿ ಸರಕಾರವು ವಜಾ ಮಾಡಿ ಖಾಯಂ ಆಗಿ ಮನೆಗೆ ಕಳಿಸಿದೆ. ವ್ಯಕ್ತಿಗತ ದ್ವೇಷಕ್ಕಿಂತ ಕಲೆ ಮುಖ್ಯ, ಜಗಳ ಮುನಿಸು ಮನಸ್ತಾಪಗಳಿಗಿಂತ ರಂಗಾಯಣದಂತಹ ಸಂಸ್ಥೆ ಉಳಿದು ಬೆಳೆಯುವುದು ಮುಖ್ಯ ಎನ್ನುವುದನ್ನು ಕಲಾವಿದರುಗಳು ಅರಿತುಕೊಂಡಿದ್ದರೆ ಅವರಿಗೆ ಈ ಗತಿ ಬರುತ್ತಲೇ ಇರಲಿಲ್ಲ. ವ್ಯಯಕ್ತಿಕ ತೆವಲು, ಜಾತಿ ಪ್ರೀತಿ ಹಾಗೂ ಪ್ರತಿಷ್ಟೆಗಳಿಗಿಂತ ರಂಗಾಯಣದಂತಹ ಸಂಸ್ಥೆಯ ಬೆಳವಣಿಗೆಯೇ ತಮ್ಮ ಪ್ರಮುಖ ಆದ್ಯತೆ ಎಂದು ತಿಳಿದಿದ್ದರೆ ಪ್ರೊ.ಹುಡಗಿರವರಿಗೆ ಈ ರೀತಿ ಮಾನನಷ್ಟ ಆಗುತ್ತಿರಲಿಲ್ಲ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದರೆ ಸಮುದಾಯದ ಅಧ್ಯಕ್ಷರಾದ ಹುಡಗಿಯವರಿಗೆ ಈ ಪರಿ ಅವಮಾನವೂ ಆಗುತ್ತಿರಲಿಲ್ಲ. ಈ ವಿವೇಕಹೀನ ಹುಡಗಿ ಹಾಗೂ ಅಲ್ಲಿಯ ಅವಿವೇಕಿ ಕಲಾವಿದರುಗಳ ನಡುವಿನ ಜಿದ್ದಾಜಿದ್ದಿ, ಆರೋಪ ಪ್ರತ್ಯಾರೋಪ ಹಾಗೂ ವ್ಯಕ್ತಿಗತ ಸಂಘರ್ಷಗಳಿಗೆ ಕಲಬುರ್ಗಿ ರಂಗಾಯಣ ಬಲಿಯಾಗಿ ಹೋಯಿತು. ಸರಕಾರದ ಕೊಟ್ಯಾಂತರ ಹಣ ಬರಬಾದಾಗಿ ಹೋಯಿತು. ಕೊನೆಗೆ ದ್ವೇಷದ ಕಿಚ್ಚಿನಲ್ಲಿ ನಿರ್ದೇಶಕ ಹಾಗೂ ಕಲಾವಿದರೆ ದುರಹಂಕಾರವೆಲ್ಲಾ ಉರಿದು ಹೋಗಿ ರಂಗಾಯಣದಿಂದಲೇ ಹೊರಹಾಕಿಸಿಕೊಳ್ಳಬೇಕಾಯಿತು. ಕಳೆದ ಆರು ತಿಂಗಳಿಂದ ದಾರಾವಾಹಿಯಂತೆ ದಿನಕ್ಕೊಂದು ರೂಪದಲ್ಲಿ ಪ್ರಕಟಗೊಳ್ಳುತ್ತಲೇ ಬಂದ ಕಲಬುರ್ಗಿ ರಂಗಾಯಣದ ಕರ್ಮಕಾಂಡ ಇಲ್ಲಿಗೆ ಸಧ್ಯಕ್ಕೆ ಮುಕ್ತಾಯವಾದಂತಾಯಿತು. ಇಡೀ ಕಲಬುರ್ಗಿಯ ರಂಗಕರ್ಮಿಗಳು, ರಂಗಸಮಾಜದವರು ನಿಟ್ಟುಸಿರು ಬಿಟ್ಟು ನಿರಾಳರಾದರು.


ಇನ್ನು ಶಿವಮೊಗ್ಗ ರಂಗಾಯಣದ ನಿರ್ದೇಶಕ ಇಕ್ಬಾಲ್ ಅಹಮದ್‌ರವರಿಗೂ ಸಹ ವಜಾಗೊಳಿಸಿ ಗೇಟ್ ಪಾಸ್ ಕೊಡಲಾಗಿದೆ. ಈ ರಂಗಾಯಣ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷಗಳೇ ಕಳೆದರೂ ಇಲ್ಲಿವರೆಗೂ ಅಲ್ಲಿ ಕಲಾವಿದರುಗಳ ಆಯ್ಕೆಯೇ ಆಗಿಲ್ಲ. ಆದರೆ ಇಲಾಖೆಯಿಂದ ಹಣ ಬಿಡುಗಡೆಯಾಗುತ್ತಲೇ ಇದೆ. ಇಲಾಖೆಯ ನಿರ್ದೇಶಕರಾಗಿದ್ದುಕೊಂಡೇ ಸಾರ್ವಜನಿಕರಿಗೆ ಐದು ಲಕ್ಷ ವಂಚಿಸಿದ ಅರೋಪವೂ ಇಕ್ಬಾರ ಮೇಲಿದೆಯಾದರೂ ಅದು ರಂಗಾಯಣದ ಚೌಕಟ್ಟಿನ ಹೊರಗಿನ ಅವ್ಯವಹಾರವಾಗಿದೆ. ಅದರೆ ಯಾವಾಗ ಇಕ್ಬಾಲ್‌ರವರು ಚಿನ್ನರಮೇಳ ಎನ್ನುವ ಮಕ್ಕಳ ಕಾರ್ಯಕ್ರಮವನ್ನು ರಂಗಸಮಾಜ ಹಾಗೂ ಇಲಾಖೆಯ ಪೂರ್ವಾನುಮತಿ ಪಡೆಯದೇ ತಮಗಿಷ್ಟ ಬಂದ ಹಾಗೆ ಆಯೋಜಿಸಿ ಅದಕ್ಕೆ 22 ಲಕ್ಷ ರೂಪಾಯಿಯ ಖರ್ಚಿನ ಪಟ್ಟಿಯನ್ನು ಇಲಾಖೆಗೆ ಒದಗಿಸಿ ಹಣ ಪಡೆದರೋ ಆಗ ಇಕ್ಬಾಲ್‌ರವರ ಹೆಗಲಿಗೆ ಹಣ ದುರುಪಯೋಗದ ಆರೋಪ ಏರಿಕೊಂಡಿತು. ಸಂಸ್ಕೃತಿ ಇಲಾಖೆಯ ನಿಯಮಗಳನ್ನು ಮೀರಿ ಖರ್ಚು ವೆಚ್ಚಗಳನ್ನು ಮಾಡಿದ್ದಕ್ಕೆ ಇಲಾಖೆ ಲೆಕ್ಕ ಕೇಳತೊಡಗಿತು. ಇಕ್ಬಾಲರು ತಮ್ಮ ಜೋರು ದ್ವನಿ ಹಾಗೂ ದಾದಾಗಿರಿ ವರ್ತನೆಯಿಂದ ಎಲ್ಲರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಲೇ ಬಂದರು. ಇದು ಎಂತಹ ಅತಿರೇಕಕ್ಕೆ ಹೋಯಿತೆಂದರೆ.. ಸಚಿವೆ ಉಮಾಶ್ರೀಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಇಕ್ಬಾಲ್ ತಮ್ಮ ಮೇಲೆ ಬಂದ ಆರೋಪಕ್ಕೆ ವಿರುದ್ದವಾಗಿ ಏರುದ್ವನಿಯಲ್ಲಿ ಬೈದಾಟಕ್ಕಿಳಿದರು. ಪ್ರಶ್ನಿಸಿದ ರಂಗಸಮಾಜದ ಸದಸ್ಯರಾದ ಡಾ.ಕೆ.ವೈ.ನಾರಾಯಣಸ್ವಾಮಿಯವರ ಮೈಮೇಲೆ ಏರಿಹೋಗಿ ಸಭೆಯಲ್ಲಿ ಸಂಘರ್ಷದ ವಾತಾವರಣವನ್ನೇ ನಿರ್ಮಿಸಿದರು.

ಶಿವಮೊಗ್ಗದ ಮಾಧ್ಯಮಗಳು ಇಕ್ಬಾಲರ ಅವತಾರಗಳನ್ನೆಲ್ಲಾ ಕಾಲಕಾಲಕ್ಕೆ ಪತ್ರಿಕೆಗಳಲ್ಲಿ ಮುದ್ರಿಸಿ ಶಿವಮೊಗ್ಗ ರಂಗಾಯಣದ ಮರ್ಯಾದೆಯನ್ನು ಹರಾಜು ಹಾಕಿದವು. ರಂಗಾಯಣದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಸಾಗರದ ಬೇನಾಮಿ ರಂಗತಂಡದ ಹೆಸರಲ್ಲಿ  ಸೂಳೆ ಸನ್ಯಾಸಿ ನಾಟಕವನ್ನು ಇಕ್ಬಾಲರೇ ನಿರ್ದೇಶಿಸಿ ಅದನ್ನು ರಂಗಾಯಣದ ರಂಗೋತ್ಸವದಲ್ಲಿ ಪ್ರದರ್ಶಿಸಿ ಇಲಾಖೆಯಿಂದ ಹಣವನ್ನೂ ಮಂಜೂರು ಮಾಡಿಸಿಕೊಂಡಿರುವ ಆರೋಪ ಶಿವಮೊಗ್ಗದಾದ್ಯಂತ ಸುದ್ದಿಮಾಡಿತು. ಇಕ್ಬಾಲರ ಈ ಎಲ್ಲಾ ವಿಕ್ಷಿಪ್ತತೆ ಹಾಗೂ ಆರ್ಥಿಕ ಅರಾಜಕತೆಯಿಂದ ರೋಸಿ ಹೋದ ರಂಗಸಮಾಜದ ಸದಸ್ಯರು ಅವರನ್ನು ವಜಾ ಮಾಡಲು ಉಮಾಶ್ರೀಯವರಿಗೆ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದರು. ಪ್ರೊ.ಹುಡಗಿಯವರ ಜೊತೆಗೆ ಇಕ್ಬಾಲರ ವಜಾ ಆದೇಶವೂ ಸರಕಾರದಿಂದ ಹೊರಬಂದಿತು. ಸಧ್ಯಕ್ಕೆ ವಿಕ್ಷಿಪ್ತ ಮನಸ್ಥಿತಿಯ, ಸರ್ವಾಧಿಕಾರಿ ಮನೋಭಾವದ ಪ್ರತಿಭಾವಂತ ರಂಗನಿರ್ದೇಶಕ ಇಕ್ಬಾಲ್ ಅಹಮದ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿ ಅಕ್ರಮದ ಆರೋಪಗಳನ್ನು ಹೊತ್ತುಕೊಂಡು ಮನೆಗೆ ಮರಳಿದ್ದಾರೆ. ಕಲಬುರ್ಗಿ ರಂಗಾಯಣದಂತೆಯೇ ಶಿವಮೊಗ್ಗ ರಂಗಾಯಣವೂ ಈ ಸಧ್ಯಕ್ಕೆ ವಾರಸುದಾರರಿಲ್ಲದೇ ಅನಾಥವಾಗಿದೆ. ಮತ್ತೆ ವಾರಸುದಾರರಾಗುವವರ ಆಯ್ಕೆ ಪ್ರಕ್ರಿಯೆ ಆರಂಭವಾಗಬೇಕಿದೆ. ಅಸಮರ್ಥರ ಆಯ್ಕೆಯಿಂದಾದ ದುಷ್ಪರಿಣಾಮಗಳನ್ನು ಅನುಭವಿಸಿದ ರಂಗಸಮಾಜದ ಸದಸ್ಯರು ಹಾಗೂ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಈ ಎಲ್ಲಾ ಅನಪೇಕ್ಷಿತ ಘಟನೆಗಳಿಂದ ಪಾಠ ಕಲಿತು ಸಮರ್ಥರಾದವರನ್ನು ಈ ಎರಡೂ ರಂಗಾಯಣಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕಿದೆ. ರಂಗದಿಗ್ಗಜ ಬಿ.ವಿ.ಕಾರಂತರ ಪ್ರಾಂತ್ಯಕ್ಕೊಂದು ಸದೃಢವಾದ ರಂಗಾಯಣದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ದಿಟ್ಟವಾಗಿ ಪ್ರಯತ್ನಿಸಬೇಕಿದೆ. ಒಟ್ಟಿನ ಮೇಲೆ ಎಲ್ಲಾ ರಂಗಾಯಣಗಳೂ ಸೇರಿ ರಂಗಕಲೆಯ ಶ್ರೀಮಂತಿಕೆಯನ್ನು ನಾಡಿನಾದ್ಯಂತ ಉಳಿಸಿ ಬೆಳೆಸಬೇಕಿದೆ. ಸರಕಾರದ ಮೂಲಕ ರಂಗಚಟುವಟಿಕೆಗಳಿಗೆ ವೆಚ್ಚವಾಗುತ್ತಿರುವ ಜನರ ಹಣ ಸಮರ್ಥವಾಗಿ ಬಳಕೆಯಾಗಬೇಕಿದೆ. ಪಕ್ಷ ರಾಜಕೀಯ, ಜಾತಿ ರಾಜಕೀಯದಿಂದ ಹೊರತಾದ ಕಲಾಭಿಮುಖಿ ವ್ಯವಸ್ಥೆಯೊಂದು ರಂಗಾಯಣಗಳಲ್ಲಿ ರೂಪಗೊಳ್ಳಬೇಕಿದೆ. ಆಗಲೇ ಕಾರಂತರ ಕನಸು ನನಸಾಗಲು ಸಾಧ್ಯ. 

                                                                  -ಶಶಿಕಾಂತ ಯಡಹಳ್ಳಿ       
      
  



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ