ಶನಿವಾರ, ಮಾರ್ಚ್ 26, 2016

’ಸೀತಾಂತರಾಳ’ದಲ್ಲಿ ಅನಾವರಣಗೊಂಡ ರಾಮಾಂತರಾಳ :

ನಾಟಕ ವಿಮರ್ಶೆ
       ಪುರುಷ ಪ್ರಧಾನ ವ್ಯವಸ್ಥೆ ಪ್ರಶ್ನಿಸುವ "ಸೀತಾಂತರಾಳ" : 


ರಾಮಾಯಣ ಮಹಾಭಾರತಗಳು ಕಾಲ ಕಾಲಕ್ಕೆ ಹಲವಾರು ಬಾರಿ ಪರಾಮರ್ಶೆಗೊಳಪಡುತ್ತಲೇ ಬಂದಿವೆ. ಹವಾರು ಲೇಖಕರು ಮಹಾಕಾವ್ಯಗಳನ್ನು ವಿಭಿನ್ನ ಆಯಾಮಗಳಲ್ಲಿ ವಿಶ್ಲೇಷಿಸಿದ್ದಾರೆ. ರಾಮಾಯಣದ ದುರಂತ ಪಾತ್ರವಾದ ಸೀತೆಯನ್ನು ಕೇಂದ್ರವಾಗಿಟ್ಟುಕೊಂಡು ರಾಮನನ್ನೂ ಹಾಗೂ ರಾಮಾಯಣ ಕಾಲಘಟ್ಟದ ಪುರುಷ ಪ್ರಧಾನ ವ್ಯವಸ್ಥೆಯ ರಾಜಕೀಯವನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಶಶಿಕಾಂತ ಯಡಹಳ್ಳಿಯವರು "ಸೀತಾಂತರಾಳ" ಏಕವ್ಯಕ್ತಿ ಪ್ರಯೋಗದಲ್ಲಿ ಸಶಕ್ತವಾಗಿ ಒಡಮೂಡಿಸಿದ್ದಾರೆ. ಮೂಲಕಥೆಯಲ್ಲಿನ ಪುರಾವೆಗಳನ್ನೇ ಇಟ್ಟುಕೊಂಡು ಸೀತೆಯ ಅಂತರಾಳವನ್ನು ಸೀತೆಯ ಮೂಲಕವೇ ಎಳೆಎಳೆಯಾಗಿ ಬಿಡಿಸಿಟ್ಟು ಆರಂಭದಿಂದ ಅಂತ್ಯದವರೆಗೆ ಕುತೂಹಲವನ್ನು ಕೆರಳಿಸಿ ನೋಡುಗರ ಅಂತಃಕರಣವನ್ನು ಕಲುಕುವಲ್ಲಿ ರಂಗಪಠ್ಯ ಯಶಸ್ವಿಯಾಗಿದೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿದೃಶ್ಯ ರಂಗ ಕಲಾ ಸಂಘವು 2016, ಮಾರ್ಚ 8 ರಂದು ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿಸೀತಾಂತರಾಳಏಕವ್ಯಕ್ತಿ ನಾಟಕ ಪ್ರದರ್ಶನಗೊಂಡಿತು. ಶಶಿಕಾಂತ ಯಡಹಳ್ಳಿಯವರು ರಚಿಸಿದ ನಾಟಕವನ್ನು ವೈ.ಡಿ.ಬದಾಮಿಯವರು ಮಂಜುಳಾ ಬದಾಮಿಯವರಿಗೆ ನಿರ್ದೇಶಿಸಿದ್ದು ಸಾಣೇಹಳ್ಳಿಯ ರಂಗಶ್ರೀ ಸಾಂಸ್ಕೃತಿಕ ಗ್ರಾಮಾಭಿವೃದ್ದಿ ಸಂಸ್ಥೆಯು ನಿರ್ಮಿಸಿದೆ.

ರಾಮನು ತನ್ನ ಪತ್ನಿಯನ್ನು ಸಂದೇಹಿಸಿ ತಮ್ಮ ಲಕ್ಷ್ಮಣನ ಮೂಲಕ ಸೀತೆಯನ್ನು ಕಾಡಿಗಟ್ಟಿದ ನಂತರ ಶುರುವಾಗುವ ನಾಟಕವು ಒಂದು ರಾತ್ರಿಯ ಕಾಲಘಟ್ಟವನ್ನು ಹೊಂದಿದೆ. ದಟ್ಟಾರಣ್ಯದಲ್ಲಿ ದಿಕ್ಕುಕಾಣದೆ ಕಂಗಾಲಾಗಿ ಪರಿತಪಿಸುವ ತುಂಬು ಗರ್ಭಿಣಿ ಸೀತೆ ತನ್ನ ಬದುಕಿನ ಘಟನೆಗಳಿಗೆ ಮಾತಾಗುತ್ತಾ ಹೋಗುತ್ತಾಳೆ. ಯಾವ ಕ್ಷಣದಲ್ಲಾದರೂ, ಯಾವುದೇ ರೂಪದಲ್ಲಾದರೂ ಸಾವು ಬರಬಹುದೆಂದು ನಿರ್ಧರಿಸಿದ ಅಸಹಾಯಕ ಅಬಲೆ ಸೀತೆ ಸಾವಿಗೆ ಮುಂಚೆ ತನ್ನ ಮನದೊಳಗಿನ ತಲ್ಲಣ ತಳಮಳಗಳನ್ನು ಮಾರ್ಮಿಕ ಮಾತುಗಳ ಮೂಲಕ ಹೊರಹಾಕುತ್ತಾಳೆ.


"ಯಾರನ್ನು ಮದುವೆಯಾಗಬೇಕು ಎನ್ನುವ ಆಯ್ಕೆಯ ಸ್ವಾತಂತ್ರ್ಯವೂ ಇಲ್ಲದ ನಾನು ಗೆದ್ದವರಿಗೆ ಪಾರಿತೋಷಕವಾಗಿದ್ದೆ" ಎಂದು ಹೇಳುವ ಸೀತೆ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಅತಂತ್ರ ಸ್ಥಿತಿಗೆ ರೂಪಕವಾಗಿ ನಾಟಕದಲ್ಲಿ ಚಿತ್ರಿತಳಾಗಿದ್ದಾಳೆ. "ನಂಬಿದವರಿಗೆ ಆಶ್ರಯಕೊಡುವ ಶ್ರೀರಾಮನನ್ನು ನಂಬಿ ಬಂದಿದ್ದಕ್ಕೆ ಎಂಥಾ ಶಿಕ್ಷೆಕೊಟ್ಟೆ ರಾಮಾ.. ಶೂದ್ರ ಶಂಭೂಕನನ್ನು ಕೊಂದ ಹಾಗೆ ನನ್ನನ್ನು ಕೊಂದು ಬಿಡಬೇಕಾಗಿತ್ತು.." ಎಂದು ಗೋಳಾಡುವ ಸೀತೆ ರಾಮನ ಮಹಿಳಾ ವಿರೋಧಿತನವನ್ನು ಪ್ರಶ್ನಿಸುತ್ತಲೇ ಸಾಗುತ್ತಾಳೆ. ಆಗ ರಾಮ ವನವಾಸಕ್ಕೆ ಹೊರಟಾಗ ಸುಖಸಂಪತ್ತುಗಳನ್ನು ಬಿಟ್ಟು ಸೀತೆ ಪತಿಯ ಹಿಂದೆ ಹೊರಟರೆ... ಈಗ ಅರಮನೆಯಲ್ಲಿ ರಾಮ ಬೆಚ್ಚಗಿದ್ದಾಗ ಕಾಡಲ್ಲಿ ಅನಾಥೆಯಾಗಿ ತುಂಬು ಬಸುರಿ ಸೀತೆ ಅಲೆದಾಡುತ್ತಾ ತನ್ನ ಸಂಕಟಗಳನ್ನು ತೋಡಿಕೊಳ್ಳುವುದನ್ನು ಕೇಳಿದ ನೋಡುಗರ ಕಣ್ಣಲ್ಲಿ ನೀರಾಡದೇ ಇರದು.

ಶ್ರೀರಾಮ ಇಷ್ಟೆಲ್ಲಾ ಸೀತೆಗೆ ಅನ್ಯಾಯ ಮಾಡಿದರೂ ರಾಮನ ಬಗ್ಗೆಯೆ ಆಲೋಚಿಸುವ ಸೀತೆ " ಪ್ರಜೆಯೊಬ್ಬನಿಗಾಗಿ ಪತ್ನಿಯನ್ನೇ ಕಾಡಿಗಟ್ಟಿದ ಪ್ರಜಾಪ್ರೀಯ ದೊರೆ ಎಂದು ಚರಿತ್ರೆಯಲ್ಲಿ ಹೆಸರಾಗಬಯಸಿದೆಯಾ ರಾಮಾ.. ಇದೇ ಇತಿಹಾಸ ಮುಂದೊಂದು ದಿನ ಶ್ರೀರಾಮಚಂದ್ರನನ್ನು ಪತ್ನಿಪೀಡಕ ಪತಿ, ನಂಬಿಕೆದ್ರೋಹ ಗಂಡ, ಬ್ರೂಣಹತ್ಯಾ ಪ್ರೇರಕ ತಂದೆ, ಮಹಿಳಾ ವಿರೋಧಿ ಅಮಾನವೀಯ ದೊರೆ ಎಂದೆಲ್ಲಾ ಕರೆಯಬಹುದು ಎನ್ನುವ ಆತಂಕ ನನ್ನದು.." ಎಂದು ಪತಿಯ ಗೌರವದ ಕುರಿತು ಚಿಂತಿತಳಾಗುತ್ತಾಳೆ.

ಕಾವ್ಯಾತ್ಮಕ ಸಂಭಾಷಣೆಗಳು ನಾಟಕದಾದ್ಯಂತ ಕೇಳುಗರ ಮನಸ್ಸನ್ನು ಹೊಕ್ಕು ಕಾಡುವಂತಿವೆ. " ಪುರುಷ ಕುಲದ ಆದರ್ಶದ ಉಮೇದಿನಲ್ಲಿ, ಹೆಣ್ಣನ್ನು ಆಳಬಯಸುವ ಹುಂಬು ಹುಮ್ಮಸ್ಸಿನಲ್ಲಿ, ಶಂಕೆ ಬಂದಾಗಲೆಲ್ಲಾ ಮಹಿಳೆಯನ್ನು ಅಂಕೆಯಲ್ಲಿಟ್ಟುಕೊಳ್ಳ ಬಯಸುವ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಶತಶತಮಾನಗಳಿಂದ ಸ್ತ್ರೀಕುಲ ನಲುಗಿಹೋಗಿದೆ ರಾಮಾ. ನೀನಾದರೂ ಅಹಲ್ಯೆಗೆ ಶಾಪವಿಮೋಚನೆ ಮಾಡಿದಂತೆ ಇಡೀ ಸ್ತ್ರೀಕುಲವನ್ನೇ ಶೋಷಣೆಯಿಂದ ಮುಕ್ತರನ್ನಾಗಿಸಿ ಪಾವನಗೊಳಿಸುತ್ತೀ ಎಂದು ಬಹಳವಾಗಿ ನಂಬಿದ್ದೆ. ಆದರೆ ಸ್ತ್ರೀ  ಕುಲ ಹೋಗಲಿ, ನಿನ್ನ ಮನೆಯ ಕುಲಸ್ತ್ರೀಯನ್ನೇ ಕಾಡಿಗಟ್ಟುತ್ತೀ ಎಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ ರಘೋತ್ತಮಾ" ಎಂದು ಸೀತೆ ರಾಮನ ನೆಪದಲ್ಲಿ ಇಡೀ ಪುರುಷ ಪ್ರಧಾನ ವ್ಯವಸ್ಥೆಯ ಸ್ತ್ರೀವಿರೋಧಿತನವನ್ನು ಬೆತ್ತಲುಗೊಳಿಸುತ್ತಾಳೆ.

ಹೆಣ್ಣಾಗಿ ಇನ್ನೊಂದು ಹೆಣ್ಣಿನ ಸಂಕಟಕ್ಕೂ ದ್ವನಿಯಾಗುವ ಸೀತೆಯು ರಾಮಲಕ್ಷ್ಮಣರ ಪೌರುಷಕ್ಕೆ ಬಲಿಯಾದ ಶೂರ್ಪನಖಿಯ ಪರವಾಗಿ ಮಾತಾಡುತ್ತಾ "ಆರ್ಯಾ ಹೀಗೆ ಹೆಣ್ಣಿನ ಸ್ತ್ರೀತನದ ಮೇಲೆ ಹಲ್ಲೆ ಮಾಡಿದ್ದು ಮರ್ಯಾದಾ ಪುರುಷೋತ್ತಮನಾದ ನಿನಗೆ ಶೋಬೆ ತರುವಂತಹುದಲ್ಲಾ" ಎಂದು ಮರಗುತ್ತಾಳೆ. ಗಂಡಸರು ರಕ್ಷಣೆಯ ಹೆಸರಲ್ಲಿ ಮಹಿಳೆಯರ ಸುತ್ತ ವೃತ್ತಗಳನ್ನೆಳೆಯುತ್ತಾ ಬಂಧನಕ್ಕೊಳಪಡಿಸಿ ಅಸಹಾಯಕರನ್ನಾಗಿಸುವ ಪುರುಷರ ತಂತ್ರವೇ ಲಕ್ಷಣರೇಖೆ ಎಳೆಯುವುದು" ಎನ್ನುವ ಸೀತೆಯ ಮಾತುಗಳು ಅದೆಷ್ಟು ನಿಜ ಎಂದೆನಿಸುವಂತಿವೆ. "ರಾಮ ರಾವಣರಂತವರ ಪುರುಷಹಂಕಾರಕ್ಕೆ ಬಲಿಪಶುವಾಗುವುದು ಸ್ತ್ರೀಯರೇ ಆಗಿದ್ದೊಂದು ವಿಪರ್ಯಾಸ" ಎಂದು ಪುರುಷಾಧಿಕಾರವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾಳೆ.

ರಾಜರುಗಳ ವಿಸ್ತರಣಾವಾದ, ಅಧಿಕಾರಕ್ಕಾಗಿ ಮಾಡುವ ಯುದ್ದಗಳು ಅದು ಹೇಗೆ ಅಗಣಿತ ಜೀವನಾಶಕ್ಕೆ ಕಾರಣವಾಯಿತು. ಯಾರದೋ ಸ್ವಾರ್ಥಕ್ಕೆ ಇನ್ಯಾರೋ ಹೇಗೆ ಬಲಿಯಾಗಬೇಕಾಯ್ತು ಎನ್ನುವುದನ್ನೆಲ್ಲಾ ಉದಾಹರಣೆಗಳ ಸಮೇತ ಕೇಳುಗರು ತಲೆದೂಗುವಂತೆ ಸೀತೆ ತರ್ಕಬದ್ಧವಾಗಿ ಸಂವಾದ ಮಾಡುವುದೇ ನಾಟಕದ ವಿಶೇಷತೆಯಾಗಿದೆ. ಆದರೆ ರಾಮನನ್ನು ಎಲ್ಲಾ ರೀತಿಯಿಂದಲೂ ವಿಶ್ಲೇಷಿಸುವ ಸೀತೆ ಕೊಟ್ಟ ಕೊನೆಗೆ " ರಾಮಾ ನೀನಿಲ್ಲದಿದ್ದರೂ ಚಿಂತೆಯಿಲ್ಲ.. ನಿನ್ನ ನಾಮದ ಬಲವಾದರೂ ಜೊತೆಗಿರಲಿ ರಾಮಾ.." ಎಂದು ಹಲಬುವುದೇಕೋ ಗೊತ್ತಿಲ್ಲ. ರಾಮನ ಸ್ತ್ರೀವಿರೋಧಿತನವನ್ನು ನಾಟಕದಾದ್ಯಂತ ಹೇಳಿದ ಸೀತೆಗೆ ಅಂತಿಮವಾಗಿ ಆತನ ನಾಮಬಲವಾದರೂ ಯಾಕೆ ಬೇಕೋ ತಿಳಿದಿಲ್ಲ. ಆದರೆ.. ನಾಟಕದ ಸೀತೆ ರಾಮನನ್ನು ಕಟುವಾಗಿ ವಿಮರ್ಶಿಸುತ್ತಲೇ ರಾಮನ ನಾಮಬಲವನ್ನು ಅಪೇಕ್ಷಿಸುತ್ತಾಳೆ. ದ್ವೇಶಪೂರಿತವಾಗಿ ಪುರುಷ ವಿರೋಧಿಯಾಗದ ಸೀತೆ ಪುರುಷ ಪ್ರಧಾನ ವ್ಯವಸ್ಥೆಯ ಜೀವವಿರೋಧಿ ಮೌಲ್ಯಗಳನ್ನು ಮಾತ್ರ ವಿರೋಧಿಸುವುದು ನಾಟಕದ ಸಕಾರಾತ್ಮಕ ಅಂಶವಾಗಿದೆ

ನಾಟಕದ ಅಂತ್ಯ ತುಂಬಾ ಆಶಾದಾಯಕವಾಗಿದೆ. ಸಾಯಲು ಸಿದ್ಧಳಾಗಿದ್ದ ಸೀತೆ ಕೊನೆಗೆ "ಅದೋ ಸಾವಕಾಶವಾಗಿ ಮೂಡನದಲ್ಲಿ ಬೆಳಕು ಮೂಡುತ್ತಿದೆ. ರಾತ್ರಿ ಕಳೆದ ಮೇಲೆ ಹಗಲು ಬರಲೇಬೇಕಲ್ಲವೇ. ನಂಬಿದವರು ನನ್ನ ನಡುನೀರಿನಲ್ಲಿ ಕೈಬಿಟ್ಟರೂ ಬರುವ ನಾಳೆಗಳಲ್ಲಾದರೂ ಭರವಸೆ ಇಡಲೇಬೇಕಲ್ಲವೇ. ನಾನು ಬದುಕುತ್ತೇನೆ ನನ್ನ ಮಗುವಿಗಾಗಿ ಬದುಕುತ್ತೇನೆ... ನನ್ನ ಕುರುಳ ಕುಡಿ ಚಿಗುರುವುದಕ್ಕಾಗಿಯಾದರೂ ಜೀವದಿಂದಿರುತ್ತೇನೆ..." ಎಂದು ತನ್ನ ಮನದಾಳದ ಸಂಕಟಗಳನ್ನೆಲ್ಲಾ ಹೊರಹಾಕಿ ಹಗುರಾಗಿ ಬಸಿರ ಕುಡಿಗಳಿಗಾಗಿ ಬದುಕುವ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ನೋಡುಗರಲ್ಲೂ ಸಹ ಸಕಾರಾತ್ಮಕ ಭಾವನೆ ಮೂಡುವಂತೆ ಸೀತೆ ಪ್ರೇರೇಪಿಸುತ್ತಾಳೆ. ತಾಳಲಾರದ ಕಷ್ಟಗಳು ಬಂತೆಂದು ಮಗುವನ್ನೂ ಕೊಂದು ತಾವೂ ಸಾಯುವ ಹತಾಶ ತಾಯಂದಿರು ಇರುವ ಪ್ರಸ್ತುತ ಸನ್ನಿವೇಶದಲ್ಲಿ  ಪತಿಯಿಂದ ಪರಿತ್ಯಕ್ತಳಾಗಿ ಕಾಡು ಸೇರಿದ ಗರ್ಭಿಣಿ ಸೀತೆಯ ಬದುಕುವ ಕುರಿತ ಆಶಾದಾಯಕ ಮಾತುಗಳು ಬದುಕಲ್ಲಿ ತೀವ್ರವಾಗಿ ನೊಂದ ಮಹಿಳೆಯರಿಗೆ ದಾರಿದೀಪವೆನಿಸುವಂತಿವೆ. ಎಲ್ಲಕ್ಕಿಂತಲೂ ಬದುಕು ದೊಡ್ಡದು ಎನ್ನುವುದನ್ನು ಹೇಳುವಲ್ಲಿ ಹಾಗೂ ಸಕಾರಾತ್ಮಕ ಅಂತ್ಯವನ್ನು ಕೊಡುವಲ್ಲಿ ನಾಟಕವು ಯಶಸ್ವಿಯಾಗಿದೆ.  

ನಾಟಕದಲ್ಲಿ ಹಲವಾರು ಭಾವಗೀತೆಗಳ ಜೊತೆಗೆ ಭಾವಪೂರ್ಣವಾದ ಸಿನೆಮಾ ಹಾಡುಗಳ ತುಣುಕುಗಳನ್ನೂ ಸಾಂದರ್ಭಿಕವಾಗಿ ಬಳಸಲಾಗಿದೆ. ಕೇಳುಗರಲ್ಲಿ ರಸಾನುಭವ ಮೂಡಿಸುವಲ್ಲಿ ಹಾಡುಗಳು ಸಫಲವಾಗಿವೆ. ಕೇವಲ ಇಳಿಬಿದ್ದ ಹಸಿರು ಬಟ್ಟೆ ಹಾಗೂ ನಡುಮಧ್ಯದಲ್ಲಿ ದೊಡ್ಡ ಎಲೆಯ ಪುಟ್ಟ ಮರವನ್ನು ರಂಗಸಜ್ಜಿಕೆಯಾಗಿ ವಿನ್ಯಾಸಗೊಳಿಸಿದ್ದು ಕಲಾತ್ಮಕವಾಗಿ ಮೂಡಿಬಂದಿದೆ. ಬೆಳಕು ಕೂಡಾ ಕಲಾತ್ಮಕ ವಿನ್ಯಾಸಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ವೈ.ಡಿ.ಬದಾಮಿಯವರು ಸಂಯೋಜಿಸಿದ ಹಾಡು, ಸಂಗೀತ, ಬೆಳಕು, ಪರಿಕರ, ರಂಗವಿನ್ಯಾಸ. ಬ್ಲಾಂಕಿಂಗ್, ಮೂವಮೆಂಟ್... ಎಲ್ಲವೂ ಚೆನ್ನಾಗಿ ಮೂಡಿಬಂದಿದೆ. ರಂಗಪಠ್ಯವಂತೂ ತಂಬಾ ಸಶಕ್ತವಾಗಿದೆ, ಪ್ರತಿ ಮಾತಲ್ಲೂ ಮಾರ್ಮಿಕತೆ ಇದೆ.


ಆದರೆ.. ಸೀತೆಯ ಪಾತ್ರಧಾರಿ ಮಂಜುಳಾರವರ ಅಭಿನಯ ಇನ್ನೂ ಸಶಕ್ತಗೊಳ್ಳಬೇಕಿದೆ. ಮಾತಿನಲ್ಲಿ ಪೋರ್ಸ ಬೇಕಿದೆ. ಪಾತ್ರವನ್ನು ಆಹ್ವಾನಿಸಿಕೊಂಡು ಪಾತ್ರವೇ ತಾನಾಗಿ ಅಭಿನಯಿಸಲು ಇನ್ನೂ ಹೆಚ್ಚು ಪರಿಶ್ರಮ ಪಡಬೇಕಿದೆ. ಏಕವ್ಯಕ್ತಿ ನಾಟಕವು ಬಹುವ್ಯಕ್ತಿ ನಾಟಕಗಳಂತಲ್ಲಾ, ಇಲ್ಲಿ ಒಬ್ಬರೇ ಕಲಾವಿದೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಬೇಕಾಗುತ್ತದೆ. ಅದಕ್ಕೆ ಬಲು ದೊಡ್ಡ ಆತ್ಮವಿಶ್ವಾಸ ಹಾಗೂ ಸತತ ಅಭ್ಯಾಸಗಳ ಅಗತ್ಯವಿದೆ. ಸೀತೆಯ ಭಾವತೀವ್ರತೆ ಮಂಜುಳಾರವರ ಸಾತ್ವಿಕಾಭಿನಯದಲ್ಲಿ ಮೂಡಿ ಬರಬೇಕಿದೆ. ರಂಗಪಠ್ಯ ಮಾತ್ರ ಗಟ್ಟಿಯಾಗಿದ್ದರೆ ಸಾಲದು, ಅದನ್ನು ಅಭಿನಯ ಮಾಧ್ಯಮದ ಮೂಲಕ ಪ್ರೇಕ್ಷಕರ ಮನದಾಳಕ್ಕೆ ಮುಟ್ಟಿಸುವ ಹೊಣೆಗಾರಿಕೆ ಕಲಾವಿದೆಯದಾಗಿದೆಇದು ಮೊದಲ ಪ್ರದರ್ಶನವಾಗಿದ್ದರಿಂದ ಅಭಿನಯದಲ್ಲಾದ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಮುಂದಿನ ಪ್ರದರ್ಶಗಳಲ್ಲಿ ಮಂಜುಳಾರವರು ಸಂಪೂರ್ಣವಾಗಿ ಸೀತೆಯ ಅಂತರಾಳವನ್ನು ನೋಡುಗರ ಅಂತರಾಳ ಕಲಕುವಂತೆ ನಟಿಸುವ ಅವಕಾಶಗಳಿವೆ


                               - ಜಗದೀಶ್ ಕೆಂಗನಾಳ 
ಉಪನ್ಯಾಸಕರು, ಸರಕಾರಿ .ಪೂ.ಕಾಲೇಜು, ತಳಗವಾರ, ಚಿಂತಾಮಣಿ ತಾ ಚಿಕ್ಕಬಳ್ಳಾಪುರ ಜಿ.

               




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ